ಯಾದಗಿರಿ :ಜಿಲ್ಲೆಯ ವಿವಿಧೆಡೆ ಧಾರಕಾರವಾಗಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ವ್ಯಾಪಾರ ವಹಿವಾಟು ತಗ್ಗಿದ್ದು, ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಹೊಲದಲ್ಲಿ ಮಳೆ ನೀರು ನುಗ್ಗಿ ಬೆಳೆ ನಾಶವಾಗಿದ್ದು, ರೈತರು ಪರಿಹಾರಕ್ಕಾಗಿ ಚಿಂತಿಸುವಂತಾಗಿದೆ. ಮನೆ ಗೋಡೆಗಳು ಕುಸಿದಿವೆ. ತಗ್ಗು ಜಾಗ, ರಸ್ತೆ, ಚರಂಡಿ, ಹೊಲಗದ್ದೆಗಳಲ್ಲಿ ನೀರು ಹರಿದಾಡುತ್ತಿದ್ದು, ರಸ್ತೆಗಳು ಚರಂಡಿಗಳಂತಾಗಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಮಳೆಯಿಂದಾಗಿ ಅಲ್ಲಿಪುರ ಗ್ರಾಮ ಸಂಪೂರ್ಣ ಜಲಾವೃತಗೊಂಡಿದ್ದು, ಗ್ರಾಮದಲ್ಲಿ ಸಾಬಣ್ಣ ಭೀಮರಾಯ, ರಾಮಣಗೌಡ ಶರಣಪ್ಪಗೌಡ, ಕಂಚಗಾರಹಳ್ಳಿ ಗ್ರಾಮದಲ್ಲಿ ಹೊನ್ನಮ್ಮ ಅಯ್ಯಪ್ಪ ಹಾಗೂ ನಾಗಮ್ಮ ದೇವಪ್ಪ, ಚಾಮನಹಳ್ಳಿ ಗ್ರಾಮದಲ್ಲಿ ಸಣ್ಣ ಹಣಮಂತ ಶರಣಪ್ಪ, ಈರಮ್ಮ ಶಂಕರಯ್ಯ ಸ್ವಾಮಿ ಮನೆಗಳು ಬಿದ್ದಿವೆ. ಸ್ಥಳಕ್ಕೆ ಉಪ ತಹಶೀಲ್ದಾರ್ ಮಹಮ್ಮದ್ ಶಕೀಲ್, ಮತ್ತೋರ್ವ ಅಧಿಕಾರಿ ರಾಜಶೇಖರ ಪಾಟೀಲ, ಗ್ರಾಮಲೆಕ್ಕಿಗ ಚನ್ನಬಸಪ್ಪ, ದೇವಿಕಾ ಭೇಟಿ ನೀಡಿದ್ದರು.
ಹೆಡಗಿಮದ್ರ ಗ್ರಾಮದ ಹೊಲಗಳಲ್ಲಿ ನೀರು ನಿಂತು ಸಂಪೂರ್ಣ ಬೆಳೆಗಳು ನಾಶವಾಗಿವೆ. ಇಲ್ಲಿನ ರೈತರಾದ ಗುಲುಮೆರ್, ಮನ್ಸೂರ್ ಪಟೇಲ್, ಸಲೀಮ್ ಖುರೇಷಿ ಅವರಿಗೆ ಸೇರಿದ ಹೊಲಗಳಲ್ಲಿ ಬೆಳೆಗಳು ಜಲಾವೃತವಾಗಿವೆ. ಹಲವು ಗ್ರಾಮಗಳಲ್ಲಿ ಮನೆಗೋಡೆಗಳು ಕುಸಿದಿದ್ದು, ಯಾವುದೇ ಜೀವಹಾನಿ ಆಗಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.