ಯಾದಗಿರಿ:ಸುರಪುರ ತಾಲೂಕಿನ ವಾಗಣಗೇರಾ ಸಮೀಪದ ಬೊಮ್ಮನಹಳ್ಳಿಯ ರಸ್ತೆಯಲ್ಲಿ ಆರಂಭವಾಗಿರುವ ಕಲ್ಯಾಣ ಮಂಟಪ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಪೂರ್ಣಗೊಳಿಸಲು ಭಕ್ತಾದಿಗಳು ಆಗ್ರಹಿಸಿದ್ದಾರೆ.
ಅರ್ಧಕ್ಕೆ ನಿಂತ ದೇವಸ್ಥಾನ ಬಳಿಯ ಮಿನಿ ಕಲ್ಯಾಣ ಮಂಟಪ ಕಾಮಗಾರಿ: ಭಕ್ತರ ಆಕ್ರೋಶ
ಸುರಪುರ ತಾಲೂಕಿನ ವಾಗಣಗೇರಾ ಬಳಿಯ ಬೊಮ್ಮನಹಳ್ಳಿ ರಸ್ತೆಯಲ್ಲಿ ಅರ್ಧಕ್ಕೆ ನಿಂತ ಮಿನಿ ಕಲ್ಯಾಣ ಮಂಟಪ ಕಾಮಗಾರಿಯನ್ನು ಪೂರ್ಣಗೊಳಿಸಲು ದೇವಸ್ಥಾನದ ಭಕ್ತರು ಆಗ್ರಹಿಸಿದ್ದಾರೆ.
ಇಲ್ಲಿನ ಬೈಲ ಹನುಮಾನ್ ದೇವಸ್ಥಾನದ ಬಳಿಯಲ್ಲಿ ಕಳೆದ 3 ವರ್ಷಗಳ ಹಿಂದೆಯೇ ಮಿನಿ ಕಲ್ಯಾಣಮಂಟಪ ಕಾಮಗಾರಿ ಸುಮಾರು 15 ಲಕ್ಷ ರೂಪಾಯಿ ಅನುದಾನದಲ್ಲಿ ಆರಂಭವಾಗಿತ್ತು. ಕರ್ನಾಟಕ ಭೂಸೇನಾ ನಿಗಮ ಈ ಕಾಮಗಾರಿಯನ್ನು ನಿರ್ವಹಿಸಿದ್ದು, ಅರ್ಧಂಬರ್ಧ ಕೆಲಸ ಮಾಡಿ ಅನುದಾನವನ್ನು ಲಪಟಾಯಿಸಿದ್ದಾರೆ ಎಂದು ಮಠದ ಭಕ್ತರು ಆರೋಪಿಸಿದ್ದಾರೆ.
ಕಾಮಗಾರಿಯ ಕುರಿತು ಹನುಮಾನ್ ದೇವಸ್ಥಾನದ ಭಕ್ತ ವೇಣುಗೋಪಾಲ್ ನಾಯಕ್ ಮಾತನಾಡಿ, ಬೈಲ ಹನುಮಾನ ದೇವಸ್ಥಾನಕ್ಕೆ ಸಾವಿರಾರು ಭಕ್ತರಿದ್ದಾರೆ. ಈ ಸ್ಥಳದಲ್ಲಿ ಮದುವೆ, ಜಾವಳ ಸೇರಿದಂತೆ ವರ್ಷದಲ್ಲಿ ನೂರಾರು ಕಾರ್ಯಕ್ರಮಗಳು ನಡೆಯಲಿವೆ. ಎಲ್ಲ ಕಾರ್ಯಕ್ರಮಗಳಿಗೆ ಅನುಕೂಲವಾಗಲೆಂದು ಸರ್ಕಾರ ಮಿನಿ ಕಲ್ಯಾಣ ಮಂಟಪ ಮಂಜೂರು ಮಾಡಿದೆ. ಆದರೆ ಕರ್ನಾಟಕ ಭೂಸೇನಾ ನಿಗಮದ ಅಧಿಕಾರಿಗಳು ಸಂಪೂರ್ಣ ಕಾಮಗಾರಿ ಪೂರ್ತಿ ಮಾಡದೇ ಅನುದಾನ ಹಣ ಕಬಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ಕಳೆದ ಮೂರು ವರ್ಷಗಳಿಂದ ಕಾಮಗಾರಿ ಪ್ರಗತಿ ಕಾಣದಿರುವುದು ಭಕ್ತರಲ್ಲಿ ಬೇಸರ ಮೂಡಿಸಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಭಕ್ತರ ಕಾರ್ಯಕ್ರಮಗಳಿಗೆ ಅದನ್ನು ಒದಗಿಸಬೇಕೆಂದು ಆಗ್ರಹಿಸಿದರು.