ಯಾದಗಿರಿ: ಕೈಮಗ್ಗ ಕಾರ್ಮಿಕರು ತಮ್ಮ ಹಕ್ಕನ್ನು ಪಡೆಯಬೇಕಾದರೆ ಹೋರಾಟ ನಡೆಸಬೇಕಾಗಿರುವುದು ಅನಿವಾರ್ಯವಾಗಿದೆ. ಒಂದ್ವೇಳೆ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ನನ್ನ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಮುಂದುವರೆಯಲಿದೆ ಎಂದು ಗಾಂಧಿವಾದಿ ಪ್ರಸನ್ನ ಎಚ್ಚರಿಸಿದರು.
ಕೈಮಗ್ಗ ಉದ್ಯಮಗಳಿಗೆ ಶೂನ್ಯ ತೆರಿಗೆ ರಿಯಾಯಿತಿ ನೀಡಲು ಆಗ್ರಹ ಸುರಪುರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಕೈಮಗ್ಗ ನೇಕಾರರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಸಣ್ಣ ಕೈಮಗ್ಗಗಳಿಗೆ ತೆರಿಗೆ ರಿಯಾಯಿತಿ ನೀಡದ ಕೇಂದ್ರ ಸರ್ಕಾರ, ದೊಡ್ಡ ಉದ್ಯಮಿಗಳಾದ ಅದಾನಿ, ಅಂಬಾನಿಗಳಿಗೆ ನೂರಾರು ಕೋಟಿ ರೂ ತೆರಿಗೆ ರಿಯಾಯಿತಿ ನೀಡುತ್ತದೆ. ಈಗಾಗಲೇ ಕೈಮಗ್ಗ ಉದ್ಯಮಗಳು ಮತ್ತು ಸಣ್ಣ ಕೈಗಾರಿಕೆಗಳು ಅಳಿವಿನಂಚಿನಲ್ಲಿವೆ. ಆದ್ದರಿಂದ ಸರ್ಕಾರ ಕೈಮಗ್ಗ ನೇಕಾರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಉಪವಾಸ ಸತ್ಯಾಗ್ರಹದ ವೇಳೆ ಆಗಮಿಸಿದ ಕೇಂದ್ರ ಸಚಿವ ಸದಾನಂದ ಗೌಡ ಕೇಂದ್ರ ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯ ಮತ್ತು ಹಣಕಾಸು ಸಚಿವಾಲಯದ ಜೊತೆ ಮಾತನಾಡುವ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಅದಕ್ಕಾಗಿ ಒಂದು ತಿಂಗಳ ಕಾಲಾವಕಾಶವನ್ನೂ ಕೇಳಿದ್ದರು. ಅವರು ಕೇಳಿದ ಒಂದು ತಿಂಗಳ ಕಾಲಾವಧಿಯ ಗಡುವು ಮುಗಿದಿದೆ. ನವೆಂಬರ್ ಅಂತ್ಯದೊಳಗೆ ಕೇಂದ್ರ ಸರ್ಕಾರ ಸಣ್ಣ ಕೈಮಗ್ಗ ಉದ್ಯಮಗಳಿಗೆ ಶೂನ್ಯ ತೆರಿಗೆ ರಿಯಾಯಿತಿ ನೀಡದಿದ್ದರೆ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ಆ ಸಮಾವೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ದ ಅಸಹಾಕಾರ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸಮಾವೇಶಕ್ಕೆ ಚರಕ ನೂಲುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಗಪ್ಪಾ ಮಂಟೆ, ಚಿಂತಕ ಕೆಂಚಾ ರೆಡ್ಡಿ, ವಿಠಪ್ಪ ಗೊರಂಟಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.