ಗುರುಮಠಕಲ್ (ಯಾದಗಿರಿ): ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಗುರುವಿನ ಮೇಲಿನ ಗೌರವ ಕಡಿಮೆಯಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಗುರುಮಠಕಲ್ ತಾಲೂಕಿನಲ್ಲೊಂದು ಮನಕಲಕುವ ಘಟನೆ ನಡೆದಿದೆ.
ತಾಲೂಕಿನ ಕೊಟಗೇರಾ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎಂ.ಡಿ.ಶಾಹೀದ್ ಅವರಿಗೆ ಬೇರೊಂದು ಶಾಲೆಗೆ ವರ್ಗಾವಣೆಯಾಗಿದ್ದು, ಅವರು ಹೋಗುವಾಗ ಶಾಲೆಯ ಸಹ ಶಿಕ್ಷಕರು, ವಿದ್ಯಾರ್ಥಿಗಳು ಕಣ್ಣೀರಿಡುತ್ತಾ ಬೀಳ್ಕೊಟ್ಟಿದ್ದಾರೆ.
ನಮಗೆ ಚೆನ್ನಾಗಿ ಪಾಠ ಮಾಡ್ತೀರಿ. ನೀವು ಇನ್ನೂ ಪಾಠ ಮಾಡಬೇಕು. ದಯವಿಟ್ಟು ಹೋಗಬೇಡಿ, ಇಲ್ಲೇ ಇರಿ ಸರ್ ಎಂದು ಶಾಲೆಯ ಹಲವಾರು ವಿದ್ಯಾರ್ಥಿಗಳು ಮನವಿ ಮಾಡಿಕೊಳ್ಳುತ್ತಿದ್ದರು. 13 ವರ್ಷಗಳಿಂದ ಗುರುಮಠಕಲ್ ತಾಲೂಕಿನ ಕೊಟಗೇರಾ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಎಂ.ಡಿ. ಶಾಹೀದ್ ಅವರು ಕಾರ್ಯನಿರ್ವಹಿಸುತ್ತಿದ್ದರು.
ಇದನ್ನೂ ಓದಿ: ಬೆಳಗಾವಿಯಲ್ಲಿ 114 ಕೊರೊನಾ ಕೇಸ್ ಪತ್ತೆ: 6 ತಿಂಗಳ ಬಳಿಕ ಶತಕದ ಗಡಿ ದಾಟಿದ ಸೋಂಕು
ವಿದ್ಯಾರ್ಥಿಗಳಿಗೆ ಸರಳವಾಗಿ ಪಾಠ ಮಾಡಿ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದರು. ಹೀಗಾಗಿ ತಮ್ಮ ನೆಚ್ಚಿನ ಶಿಕ್ಷಕ ವರ್ಗಾವಣೆ ಆಗುತ್ತಿರುವುದು ವಿದ್ಯಾರ್ಥಿಗಳಿಗೆ ನೋವು ತಂದಿದೆ. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ರೇಖಾ ಬಾಯಿ, ಪ್ರಕಾಶ್ ವಳಾಪೂರ, ಚಂದ್ರಕಾಂತ, ಮಹೇಶ ಕುಮಾರ ಎಸ್‌ಡಿಎ, ಶ್ರೀನಿವಾಸ ಮಿಸ್ಕಿನ್ ಇದ್ದರು.