ಗುರುಮಠಕಲ್: ಗುರುಮಠಕಲ್ ಹೊರವಲಯದಲ್ಲಿನ ಮಳ್ಳ ಕಾಡಿನಲ್ಲಿರುವ ಬಂಡಲೋಗು ಜಲಪಾತ ನಯನ ಮನೋಹರವಾಗಿದೆ. ಮಲೆನಾಡ ಪಕೃತಿ ಸೊಬಗನ್ನು ಹೋಲುವ, ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುವ ಸುಂದರ ತಾಣ ಬಹಳಾನೇ ಚೆಂದ. ಅದ್ರೆ ಮೂಲ ಸೌಕರ್ಯ ಮಾತ್ರ ಇಲ್ಲಿ ಕಣ್ಮರೆಯಾಗಿದೆ.
ಪಟ್ಟಣದ ಹೊರವಲಯದ ಸುಮಾರು 3 ಕಿ.ಮೀ ದೂರದಲ್ಲಿರುವ ಮಳ್ಳ ಕಾಡಿನಲ್ಲಿ ಈ ಜಲಪಾತವಿದೆ. ಬಂಡೆಗಳ ಮೇಲೆ ಹರಿಯುತ್ತಾ ಸಾಗಿ ಸುಮಾರು 30 ಅಡಿ ಎತ್ತರದಿಂದ ನೀರು ಧುಮಿಕ್ಕುವ ದೃಶ್ಯ ಬಹಳ ಆಕರ್ಷಕ. ಸ್ಥಳೀಯರು ಇದನ್ನು ಬಂಡಲೋಗು ಎಂದು ಕರೆಯುತ್ತಾರೆ. ತೆಲಂಗಾಣದ ಗಡಿಭಾಗವಾಗಿರುವ ಕಾರಣ ಈ ಭಾಗದಲ್ಲಿ ತೆಲುಗು ಭಾಷೆ ಪ್ರಭಾವ ಹೆಚ್ಚಿದೆ. ತೆಲುಗು ಭಾಷೆಯಲ್ಲಿ ಬಂಡಲೋಗು ಎಂದರೆ ಬಂಡೆಗಳ ಹಳ್ಳ ಎನ್ನುವ ಅರ್ಥವಿದೆ. ಈ ಹೊಳೆಯು ಬಂಡೆಗಳ ಮೇಲೆ ಹರಿಯುವುದರಿಂದ ಈ ಹೆಸರು ಬಂದಿದೆ ಎಂಬುದು ಸ್ಥಳೀಯರ ಅಭಿಪ್ರಾಯ.