ಯಾದಗಿರಿ :ರಾಷ್ಟ್ರಪಿತನ ನೆನಪಿಗಾಗಿ ಗ್ರಾಮದಲ್ಲೊಂದು ಗುಡಿಯಿದೆ. ಮಹಾತ್ಮನಿಗೆ ಭಕ್ತರು ನಿತ್ಯ ಪೂಜೆ ಮಾಡುತ್ತಾರೆ. ಇದೆಲ್ಲಾ ಕಂಡು ಬರುವುದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ.
ಗಾಂಧೀಜಿಯ ಮೇಲಿನ ಅಭಿಮಾನಕ್ಕಾಗಿ 1948ರಲ್ಲಿ ಹಂಪಣ್ಣ ಸಾಹುಕಾರ್ ಎಂಬುವರು ಸರ್ಕಾರಿ ಶಾಲಾ ಆವರಣದಲ್ಲಿ ನಿರ್ಮಿಸಿದ ದೇವಾಲಯ ಇದು. ಸುಮಾರು 70 ವರ್ಷಗಳಿಂದ ರಾಷ್ಟ್ರಪಿತನಿಗೆ ಇಲ್ಲಿ ಪೂಜೆ ನಡೆಸಲಾಗುತ್ತಿದೆ.
ರಾಷ್ಟ್ರಪಿತನ ನೆನಪಿಗಾಗಿ ಗ್ರಾಮದಲ್ಲಿ ಗಾಂಧಿ ಗುಡಿ ಕೇವಲ ಪೂಜೆ ಮಾಡಲು ಮಾತ್ರ ಅಲ್ಲ. ಸ್ಥಳೀಯ ನ್ಯಾಯ ಪಂಚಾಯತ್‌ಗಳನ್ನು ಕೂಡ ಈ ಗಾಂಧಿ ಗುಡಿಯ ಕಟ್ಟೆಯಲ್ಲೇ ಬಗೆಹರಿಸಲಾಗುತ್ತದೆ. ಇಲ್ಲಿ ಸತ್ಯ, ಶಾಂತಿ, ಅಹಿಂಸೆ ಸಾರುವ ಕೆಲಸಗಳು ಆಗುತ್ತಿವೆ. ಸುಮಾರು 68 ವರ್ಷಗಳ ಬಳಿಕ ಈಗ ದೇವಾಲಯ ಜೀರ್ಣೊದ್ಧಾರ ಕಂಡಿದ್ದು, ಹೊಸದಾಗಿ ಕಂಗೊಳಿಸುತ್ತಿದೆ.
ಗಾಂಧಿಯ ಹುಟ್ಟೂರು ಪೋರಬಂದರ್ ನಂತರ ಗಾಂಧಿಗುಡಿ ಇರುವುದು ಇಲ್ಲಿಯೇ ಎಂದು ಗ್ರಾಮಸ್ಥರು ಹೆಮ್ಮೆಪಡುತ್ತಾರೆ. ಬ್ರಿಟಿಷರ ಕಪಿಮುಷ್ಠಿಯಿಂದ ದೇಶವನ್ನ ಅಹಿಂಸೆಯ ಮೂಲಕ ರಕ್ಷಿಸಿದ ಮಹಾತ್ಮಾ ಗಾಂಧೀಜಿಯವರನ್ನ ಈ ರೀತಿ ನೆನೆಯುವುದು ನಿಜಕ್ಕೂ ಶ್ಲಾಘನೀಯ. ಅಹಿಂಸಾ ಮೂರ್ತಿಯನ್ನೇ ಆದರ್ಶವಾಗಿಟ್ಟುಕೊಂಡ ಗ್ರಾಮಸ್ಥರ ಆದರ್ಶ ಎಲ್ಲೆಡೆ ಪಸರಿಸಲಿ ಎಂಬುದು ಎಲ್ಲರ ಆಶಯ.