ಯಾದಗಿರಿ: ಬಳ್ಳಾರಿ, ದಾವಣಗೆರೆ ಬಳಿಕ ಈಗ ಯಾದಗಿರಿಯಲ್ಲೂ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ. ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ದರದರನೆ ಎಳೆದೊಯ್ದು ಅಂತಿಮ ಸಂಸ್ಕಾರ ನಡೆಸಿದ್ದು, ಮಾನವ ಸಮಾಜ ತಲೆ ತಗ್ಗಿಸುವಂತಾಗಿದೆ.
ಬಳ್ಳಾರಿ ಬಳಿಕ ಯಾದಗಿರಿಯಲ್ಲಿ ಅಮಾನವೀಯ ಘಟನೆ ಯಾದಗಿರಿ ತಾಲೂಕಿನ ಹೊನಗೇರಾ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಕೋವಿಡ್ ಸೋಂಕಿತ ವ್ಯಕ್ತಿಯ ಮೃತದೇಹವನ್ನ ಆರೋಗ್ಯ ಇಲಾಖೆ ಸಿಬ್ಬಂದಿಯು ಆ್ಯಂಬುಲೆನ್ಸ್ನಿಂದ ಎಳೆದುತಂದು ಶವದ ಗುಂಡಿಯಲ್ಲಿ ಎಸೆದಿರುವ ವಿಡಿಯೋ ಈಗ ವೈರಲ್ ಆಗಿದೆ.
ರಾಯಚೂರಿನ ಸಿರವಾರದಲ್ಲಿ ಕೊರೊನಾ ವೈರಸ್ ಸೋಂಕಿತ ವ್ಯಕ್ತಿ ಮಗಳ ಮದುವೆ ಮರುದಿನವೇ ಮೃತಪಟ್ಟಿದ್ದರು. ಮೃತನ ಮರಣೋತ್ತರ ಪರೀಕ್ಷೆಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಹುಟ್ಟೂರು ಹೊನಗೇರಾದಲ್ಲಿ ಅಂತ್ಯ ಸಂಸ್ಕಾರ ಮಾಡಲು ಆತನ ಕುಟುಂಬ ನಿರ್ಧರಿಸಿದ್ದ ಹಿನ್ನೆಲೆ ಶವವನ್ನು ಸ್ವಗ್ರಾಮಕ್ಕೆ ತರಲಾಗಿತ್ತು. ಮಕ್ಕಳು, ಹೆಂಡತಿ ಅನುಪಸ್ಥಿತಿಯಲ್ಲೇ ನಡೆದಿದ್ದ ಅಂತಿಮ ಸಂಸ್ಕಾರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಅಮಾನವೀಯವಾಗಿ ಸಿಬ್ಬಂದಿ ನಡೆದುಕೊಂಡಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ತೋರಿದ ಈ ನಿರ್ಲಕ್ಷ್ಯದಿಂದ ಯಾದಗಿರಿ ಜಿಲ್ಲಾಡಳಿತದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.