ಯಾದಗಿರಿ: ರೈತರಿಗೆ ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಭೀರಲಿಂಗ ನಾಗನಟಗಿ, ಮುತ್ತಪ್ಪ ಪೂಜಾರಿ, ಪರಮಾನಂದ ಕೋಣಸಿರಸಗಿ, ಭೀಮ್‌ಸಿಂಗ್ ರಾಠೋಡ್ ಎಂದು ಗುರುತಿಸಲಾಗಿದೆ. ಪೊಲೀಸ್ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು 520 ರಸಗೊಬ್ಬರ ಚೀಲಗಳು, 2 ಖಾಸಗಿ ಕಂಪನಿಯ ಗೊಬ್ಬರದ ಚೀಲಗಳನ್ನು ಹೊಲೆಯುವ ಯಂತ್ರಗಳು, ಡಿಎಪಿ ಹೆಸರಿನ 320 ಹೊಸ ಖಾಲಿ ಚೀಲಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ.
ಹೊಸಗೇರಾ ಗ್ರಾಮ ಪಂಚಾಯತ್ ಬಳಿ ಇರುವ ಸಮುದಾಯ ಭವನದ ಮುಂದೆ ಓರ್ವ ವ್ಯಕ್ತಿಯು ರೈತರಿಗೆ ಮೋಸ ಮಾಡುವ ಉದ್ದೇಶದಿಂದ ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಜಿಲ್ಲಾ ಎಸ್ಪಿ ಡಾ. ವೇದಮೂರ್ತಿ, ಡಿವೈಎಸ್ಪಿ ಮಂಜುನಾಥ ಟಿ. ಅವರ ಮಾರ್ಗದರ್ಶನದಲ್ಲಿ ಕೃಷಿ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.