ಯಾದಗಿರಿ:ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ ಕಡು ಬಡ ಕುಟುಂಬವೊಂದು ಹೆತ್ತ ಮಗಳ ಮದುವೆಗೆ ಸಿದ್ಧತೆ ನಡೆಸಿತ್ತು. ಆದ್ರೆ, ಭೀಮಾ ನದಿ ಪ್ರವಾಹದ ರೌದ್ರಾವತಾರಕ್ಕೆ ಕುಟುಂಬಸ್ಥರು ಕಂಡ ಕನಸೆಲ್ಲ ಕೊಚ್ಚಿ ಹೋಗಿದೆ. ಮದುವೆ ಸಂಭ್ರಮದಲ್ಲಿರಬೇಕಾದ ಕುಟುಂಬವೀಗ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
ಮದುವೆ ಸಂಭ್ರಮದಲ್ಲಿರಬೇಕಾದ ಕುಟುಂಬಸ್ಥರ ಅಳಲು ನಾಯ್ಕಲ್ ಗ್ರಾಮದ ಅಬ್ದುಲ್ ರಷೀದ್ ಮತ್ತು ಸಾಬೇರ್ ಬೇಗಂ ದಂಪತಿಗೆ 8 ಜನ ಮಕ್ಕಳು. ಈ ದಂಪತಿ ನವೆಂಬರ್ ತಿಂಗಳಲ್ಲಿ ತಮ್ಮ ಹಿರಿಯ ಮಗಳ ಮದುವೆ ನಿಶ್ಚಯ ಮಾಡಿದ್ದರು. ಮಗಳ ಮದುವೆಗೆ ಸಾಲ ಮಾಡಿ ಹಣ ಹೊಂದಿಸಿ, ಬಟ್ಟೆ-ಬರೆ, ಪಾತ್ರೆ ಸೇರಿದಂತೆ ಎಲ್ಲಾ ವಸ್ತುಗಳನ್ನು ಖರೀದಿಸಿ ಮನೆಯಲ್ಲಿಟ್ಟಿದ್ರು.
ಆದ್ರೆ, ಭೀಮಾ ನದಿ ಪ್ರವಾಹದಿಂದ ಮನೆಗೆ ನೀರು ನುಗ್ಗಿದ ಪರಿಣಾಮ ಮದುವೆಗೆ ಖರೀದಿಸಿದ್ದ ಅಗತ್ಯ ಸಾಮಗ್ರಿಗಳು ನೀರು ಪಾಲಾಗಿವೆ. ಮದುವೆಯ ಸಂಭ್ರಮದಲ್ಲಿರಬೇಕಿದ್ದ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ. ತಮಗಾದ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು ಅಂತಾ ನೊಂದ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ತಮ್ಮ ಬಳಿಯಿದ್ದ 2 ಲಕ್ಷ ರೂ. ಜೊತೆಗೆ 3 ಲಕ್ಷ ರೂ. ಬಡ್ಡಿ ಸಾಲ ಪಡೆದುಕೊಂಡು ಮಗಳ ಮದುವೆಗೆ ಏರ್ಪಾಡು ಮಾಡಿದ್ರು. ಆದ್ರೆ, ಭೀಮಾ ನದಿಯ ಆರ್ಭಟಕ್ಕೆ ಮನೆಯಲ್ಲಿದ್ದ ದವಸ-ಧಾನ್ಯಗಳು, ಮಗಳಿಗೆ ಕೊಡಲು ಖರೀದಿಸಿದ್ದ ಮಂಚ, ಪಾತ್ರೆ ಸೇರಿ ವಿವಿಧ ಅಗತ್ಯ ವಸ್ತುಗಳೆಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿವೆ.