ಗುರುಮಠಕಲ್ (ಯಾದಗಿರಿ): ಗುರುಮಠಕಲ್ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ (ಕೆಜಿಬಿ)ನಲ್ಲಿ ಬುಧವಾರ ರಾತ್ರಿ 9 ಗಂಟೆಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿತ್ತು. ಬ್ಯಾಂಕ್ ಕಟ್ಟಡದ ಮೇಲ್ಭಾಗದಲ್ಲಿ ಹೊಗೆಯಾಡುತ್ತಿರುವುದನ್ನು ನೋಡಿದ ಸ್ಥಳೀಯರು ಬ್ಯಾಂಕ್ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬ್ಯಾಂಕ್‌ನ ಸಿಬ್ಬಂದಿ ಬಂದು ಬಾಗಿಲು ತೆರೆದ ನಂತರ ಸ್ಥಳೀಯರೇ ಬೆಂಕಿ ನಂದಿಸಿದ್ದಾರೆ.
ಬ್ಯಾಂಕ್‌ನಲ್ಲಿದ್ದ ಕೆಲ ದಾಖಲೆಗಳು, ಕಂಪ್ಯೂಟರ್ ಸೇರಿದಂತೆ ಪೀಠೋಪಕರಣಗಳು ಸುಟ್ಟಿವೆ. ಉಳಿದಿದ್ದ ಇತರೆ ದಾಖಲೆಗಳು, ರೆಜಿಸ್ಟರ್ ಡೈರಿಗಳನ್ನು ಬೇರೆಡೆ ಸ್ಥಳಾಂತರಿಸಲಾಯಿತು. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತಾದರೂ ಸ್ಥಳೀಯರೇ ಬೆಂಕಿಯನ್ನು ನಂದಿಸಿದ ನಂತರ ಅಗ್ನಿಶಾಮಕ ವಾಹನ ಸ್ಥಳಕ್ಕೆ ಆಗಮಿಸಿತು ಎಂದು ತಿಳಿದುಬಂದಿದೆ. ಬ್ಯಾಂಕ್‌ನಲ್ಲಿ ಫೈರ್ ಅಲಾರಾಂ ಸೇರಿದಂತೆ ಯಾವುದೇ ಸುರಕ್ಷತಾ ಕ್ರಮಗಳು ಇರಲಿಲ್ಲ. ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ.
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಅಗ್ನಿ ಮುಖ್ಯರಸ್ತೆಯಲ್ಲಿರುವ ಈ ಬ್ಯಾಂಕ್‌ನಿಂದ ಬೆಂಕಿ ಪಕ್ಕದ ಕಟ್ಟಡಗಳಿಗೆ ಹರಡಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದರು. ಯಾದಗಿರಿ ಜಿಲ್ಲಾ ಕೇಂದ್ರದಿಂದ ಅಗ್ನಿಶಾಮಕ ವಾಹನ ತೆರಳಲು ತಡವಾದ ಹಿನ್ನೆಲೆ ಸ್ಥಳೀಯರೇ ಬೆಂಕಿ ನಂದಿಸಿದ್ದಾರೆ. ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ದಲಿತ ಎಂಬ ಕಾರಣಕ್ಕೆ ಕ್ಷೌರ ನಿರಾಕರಣೆ.. ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಆರೋಪ
ಸುದ್ದಿಗಾರರೊಂದಿಗೆ ಬ್ಯಾಂಕಿನ ವ್ಯವಸ್ಥಾಪಕ ಮಹೇಶ ಮಾತನಾಡಿ, ನಮ್ಮ ಬ್ಯಾಂಕಿನ ಗ್ರಾಹಕರು ಭಯಪಡುವ ಅಗತ್ಯವಿಲ್ಲ. ಎಲ್ಲರ ಹಣ ಮತ್ತು ಲಾಕರ್ ಹಾಗೂ ಮೂಲ ದಾಖಲೆಗಳು ಸುರಕ್ಷಿತವಾಗಿವೆ. ನಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸಲು ನಮ್ಮ ಹತ್ತಿರದ ಬ್ಯಾಂಕ್ಗಳಿಗೆ ಹೋಗಿ ಹಣ ಡ್ರಾ ಮತ್ತು ಠೇವಣಿ ಮಾಡಬಹುದು. ನಾವು ಎಲ್ಲ ರೀತಿಯಲ್ಲಿ ಗ್ರಾಹಕರಿಗೆ ಸೇವೆ ಒದಗಿಸುತ್ತೇನೆ. ಮೇಲಾಧಿಕಾರಿಗಳ ಆದೇಶಿಸಿದ ನಂತರ ಸೇವೆ ಒದಗಿಸಲಾಗುವುದು ಎಂದು ತಿಳಿಸಿದರು.