ಯಾದಗಿರಿ: ನಿವೇಶನದ ಖಾತೆ ಮಾಡಿಕೊಡಲು ನಗರಸಭೆ ಕಚೇರಿ ವರ್ಗಾವಣೆ ವಿಭಾಗದ ಎಫ್‌ಡಿಎ ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನ ಬಂಧಿಸಿರುವ ಘಟನೆ ನಗರದ ತಿಮ್ಮಾಪುರ ಬಸ್ ನಿಲ್ದಾಣ ಬಳಿ ಗುರುವಾರ ಸಂಜೆ ನಡೆದಿದೆ. ಪ್ರಥಮ ದರ್ಜೆ ಸಹಾಯಕ ಸಿದ್ರಾಮೇಶ್ವರ ಬಂಧಿತ ಆರೋಪಿ.
ಯಾದಗಿರಿ ನಗರದ ಪುರಸಭೆ ಮಾಜಿ ಸದಸ್ಯ ರಾಜಾ ರಾಮಪ್ಪ ನಾಯಕ (ಜೇಜಿ) ಎಂಬುವರು ನಿವೇಶನವೊಂದರ ಮುಟೇಷನ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ, ಖಾತೆ ಮಾಡಿ ಕೊಡಲು ಪ್ರಥಮ ದರ್ಜೆ ಸಹಾಯಕ ಸಿದ್ರಾಮೇಶ್ವರ 20 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆ ಹಣ ನೀಡಲು ನಗರದ ತಿಮ್ಮಾಪುರ ಬಸ್ ನಿಲ್ದಾಣ ಬಳಿ ಬರುವಂತೆ ರಾಜಾ ರಾಮಪ್ಪ ನಾಯಕ ಎಫ್‌ಡಿಎ ಅಧಿಕಾರಿಗೆ ತಿಳಿಸಿದ್ದಾರೆ. ಅದರಂತೆ, ಸಿದ್ರಾಮೇಶ್ವರ ಅಲ್ಲಿಗೆ ಹೋಗಿ ಐದು ಸಾವಿರ ರೂಪಾಯಿಗಳು ಸ್ವೀಕರಿಸುವಾಗ ಎಸಿಬಿ, ಡಿವೈಎಸ್‌ಪಿ ಉಮಾಪತಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನ ಬಂಧಿಸಿದೆ.