ಯಾದಗಿರಿ: ಹೆಮ್ಮಾರಿ ಕೊರೊನಾದಿಂದಾಗಿ ಕ್ವಾರಂಟೈನ್ ಮಾಡುವುದು ಕಳೆದ ಐದಾರು ತಿಂಗಳಿನಿಂದ ನಡೆಯುತ್ತಿದೆ. ಆದರೆ ಈಗ ರಾಜ್ಯದಲ್ಲಿ ಜಾನುವಾರುಗಳಿಗೆ ಕ್ವಾರಂಟೈನ್ ಮಾಡುವಂತ ಪರಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ ಜನರಂತೆ ಜಾನುವಾರುಗಳಿಗೂ ಒಂದರಿಂದ ಒಂದಕ್ಕೆ ಹರಡುವ ರೋಗ ಬಂದಾಗಿದೆ. ಇದೆ ಕಾರಣದಿಂದ ಆ ಜಿಲ್ಲೆಯ ರೈತರು ಅಕ್ಷರಶ ಆತಂಕದಲ್ಲಿದ್ದಾರೆ. ಸಾವಿರಾರು ರೂ. ಖರ್ಚು ಮಾಡಿ ತಂದಂತಹ ಜಾನುವಾರುಗಳಿಗೆ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ರೈತರು ಭಯಭೀತರಾಗಿದ್ದಾರೆ.
ಜನರಿಗೆ ಕೊರೊನಾ ಜಾನುವಾರುಗಳಿಗೆ ಲಂಪಿಸ್ಕಿನ್ ರೋಗ.. ನೋಡ ನೋಡುತ್ತಿದಂತೆ ಜಾನುವಾರುಗಳಿಗೆ ಉಲ್ಬಣಿಸುತ್ತಿರುವ ರೋಗ.. ರೋಗದಿಂದ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಹೆಣಗಾಡುತ್ತಿರುವ ರೈತರು. ಇನ್ನೊಂದು ಕಡೆ ಕುಳಿತಲ್ಲೇ ಜೊಲ್ಲು ಸುರಿಸುತ್ತಿರುವ ಜಾನುವಾರುಗಳು. ಹೌದು ಯಾದಗಿರಿ ಜಿಲ್ಲೆಯಲ್ಲಿ ಕಿಲ್ಲರ್ ಕೊರೊನಾ ರಣಕೇಕೆ ಹಾಕುತ್ತಿದ್ದು, ಸಾವಿರಾರು ಮಂದಿ ಕೊರೊನಾಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈಗ ಜಾನುವಾರುಗಳಿಗೆ ಅಂತದೆ ರೋಗ ವಕ್ಕರಿಸಿಕೊಂಡಿದ್ದರಿಂದ ಜಿಲ್ಲೆಯ ರೈತರಲ್ಲಿ ಆತಂಕ ಶುರುವಾಗಿದೆ.
ಅಷ್ಟಕ್ಕೂ ಜಿಲ್ಲೆಯ ಗುರುಮಠಕಲ್ ತಾಲೂಕಿನ ಹಳ್ಳಿಗಳಲ್ಲಿ ಹೆಚ್ಚಾಗಿ ಜಾನುವಾರುಗಳಲ್ಲಿ ರೋಗ ಉಲ್ಬಣವಾಗಿದೆ. ಏಕೆಂದರೆ ತೆಲಂಗಾಣ ಗಡಿ ಹಂಚಿಕೊಂಡಿದ್ದರಿಂದ ತೆಲಂಗಾಣದಲ್ಲಿ ಹೆಚ್ಚು ಆವರಿಸಿಕೊಂಡಿರುವ ಲಂಪಿ ಚರ್ಮ ರೋಗ ಜಿಲ್ಲೆಗೂ ಎಂಟ್ರಿ ಕೊಟ್ಟಿದೆ ಅಂತಾ ಹೇಳಲಾಗುತ್ತಿದೆ. ಬಹು ವರ್ಷಗಳ ಬಳಿಕ ವಕ್ಕರಿಸಿಕೊಂಡ ಲಂಪಿ ಚರ್ಮ ರೋಗಕ್ಕೆ ಈಗಾಗ್ಲೇ ಜಿಲ್ಲೆಯಲ್ಲಿ ಸಾವಿರದ ಐನೂರಕ್ಕೂ ಅಧಿಕ ಜಾನುವಾರುಗಳು ತುತ್ತಾಗಿವೆ. ಅಷ್ಟಕ್ಕೂ ಲಂಪಿ ಚರ್ಮ ಜಾನುವಾರುಗಳಲ್ಲಿ ಹೇಗೆ ಕಾಣಿಸಿಕೊಳ್ಳುತ್ತೆ ಅಂದರೆ ಚರ್ಮದ ಮೇಲೆ ಗುಳ್ಳೆಗಳಾಗುವುದ, ಏಕಾಏಕಿ ಜಾನುವಾರುಗಳು ನಿಶಕ್ತವಾಗುವುದು, ಬಾಯಿಯಿಂದ ಜೊಲ್ಲು ಹಾಕುವುದು ಮತ್ತು ಕಣ್ಣಿನಿಂದ ನೀರು ಹನಿ ಸೋರುವುದು ರೋಗದ ಲಕ್ಷಣಗಳು ಅಂತಾ ವೈದ್ಯರು ಹೇಳುತ್ತಿದ್ದಾರೆ. ಆದರೆ ಈ ರೋಗದಿಂದ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವುದು ರೈತರಲ್ಲಿ ಸಾಕಷ್ಟು ಆತಂಕ ಮೂಡಿದೆ.