ಗುರುಮಠಕಲ್ (ಯಾದಗಿರಿ): ಒಂದು ಕಡೆ ಕೃಷ್ಣಾ ನದಿಯ ಪ್ರವಾಹ, ಮತ್ತೊಂದೆಡೆ ಮಳೆ ಅವಾಂತರದಿಂದ ರೈತರು ಕಣ್ಣೀರು ಹಾಕುವಂತಾಗಿದೆ. ವರುಣನ ಆರ್ಭಟಕ್ಕೆ ಬೆಳೆ ಸಂಪೂರ್ಣ ಹಾನಿಗೊಳಗಾಗಿ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು ಈಗ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
ಯಾದಗಿರಿ ಜಿಲ್ಲೆಯಾದ್ಯಂತ ಸುರಿದ ಮಳೆಗೆ ಹೆಸರು, ತೊಗರಿ, ಹತ್ತಿ ಬೆಳೆಗಳು ನಾಶವಾಗಿವೆ. ಕೃಷ್ಣಾ ನದಿಯ ಪ್ರವಾಹದಿಂದಾಗಿ ಜಿಲ್ಲೆಯ ರೈತರು ಬೆಳೆಗಳನ್ನು ಕಳೆದುಕೊಂಡು ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ.
ಜಿಲ್ಲೆಯ ಹತ್ತಿಕುಣಿ, ಬಂದಳ್ಳಿ, ಯಡ್ಡಹಳ್ಳಿ, ಹತ್ತಿಕುಣಿ ತಾಂಡಾ, ಸೌದಾಗರ ತಾಂಡಾ, ಗುರುಸಣಗಿ, ಕೊಳ್ಳೂರು, ಯಕ್ಷಿಂತಿ, ಅರಕೇರಾ ಕೆ ತಾಂಡಾ, ಆಶನಾಳ ತಾಂಡಾ ಮೊದಲಾದ ಕಡೆ ಸಾವಿರಾರು ಎಕರೆ ಪ್ರದೇಶದ ಬೆಳೆ ಸಂಪೂರ್ಣ ನಾಶವಾಗಿದೆ.
ಕೃಷ್ಣಾ ನದಿ ಅಬ್ಬರಕ್ಕೆ ಕೊಳೆಯುವ ಸ್ಥಿತಿ ತಲುಪಿರುವ ಬೆಳೆಗಳು... ರೈತರು ಕಂಗಾಲು ಕೊರೊನಾದಿಂದಾಗಿ ದೇಶದ ವಿವಿಧೆಡೆಯಿಂದ ತಾಯ್ನಾಡಿಗೆ ಮರಳಿದ್ದ ಜನರು ಬಳಿಕ ಸಾಲ ಮಾಡಿ ಕೃಷಿಯಲ್ಲಿ ತೊಡಗಿದ್ದರು. ಆದರೆ ಕೃಷ್ಣಾ ನದಿ ಪ್ರವಾಹದಿಂದಾಗಿ ಕಟಾವಿಗೆ ಬಂದಿದ್ದ ಫಸಲು ಸಂಪೂರ್ಣ ಹಾನಿಯಾಗಿದ್ದು, ರೈತರ ಕುಟುಂಬ ನಿರ್ವಹಣೆಗೂ ಸಂಕಷ್ಟ ಎದುರಾಗಿದೆ.
ಜಿಲ್ಲೆಯಲ್ಲಿ ಒಟ್ಟು 16 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಹಾನಿಗೊಳಗಾಗಿವೆ. ಹೆಸರು, ತೊಗರಿ, ಹತ್ತಿ ಬೆಳೆ ಜಲಾವೃತವಾಗಿ ನಷ್ಟವಾಗಿದೆ. ಅದರಲ್ಲಿ ಹೆಸರು ಸರಿಯಾಗಿ ಕಟಾವಿಗೆ ಬಂದಿತ್ತು. ಇನ್ನೇನು ರಾಶಿ ಮಾಡಬೇಕೆನ್ನುವಷ್ಟರಲ್ಲಿ ನಿರಂತರ ಮಳೆ ಸುರಿದ ಪರಿಣಾಮ ಹೆಸರು ಬೆಳೆ ಹೆಚ್ಚು ತೇವಾಂಶದಿಂದ ಕಾಯಿ ಕಟ್ಟಿಲ್ಲ. ಅಲ್ಲದೆ ಮಳೆಯಿಂದಾಗಿ ಜಮೀನಿನಲ್ಲಿಯೇ ಕೊಳೆಯುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕಳೆದ ವರ್ಷ ಕೂಡ ಬೆಳೆ ಹಾನಿಯಾಗಿತ್ತು. ಈಗ ಮತ್ತೆ ನಿರಂತರ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಸರ್ಕಾರ ಕೂಡಲೇ ಬೆಳೆಹಾನಿ ಸಮೀಕ್ಷೆ ಪೂರ್ಣಗೊಳಿಸಿ ಪರಿಹಾರ ನೀಡುವ ಕೆಲಸಕ್ಕೆ ಮುಂದಾಗಬೇಕಿದೆ.