ಗುರುಮಠಕಲ್ (ಯಾದಗಿರಿ): ಕೊರೊನಾ ಭೀತಿ ಮಧ್ಯೆಯೂ ಗುರುಮಠಕಲ್ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ. ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಭೂಮಿಯನ್ನು ಸಜ್ಜುಗೊಳಿಸುವ ಹಾಗೂ ಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಳ್ಳುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಬಿತ್ತನೆಗೆ ಅನ್ನದಾತನ ಭರದ ಸಿದ್ಧತೆ: ಕೊರೊನಾ ಭೀತಿ ನಡುವೆಯೂ ಗರಿಗೆದರಿದ ಕೃಷಿ ಚಟುವಟಿಕೆ - corona's distress
ಯಾದಗಿರಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಅಲ್ಪ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಕೃಷಿ ಚಟುವಟಿಕೆ ಆರಂಭವಾಗಿದೆ. ಗುರುಮಠಕಲ್ ಪಟ್ಟಣ ಸೇರಿದಂತೆ ವಲಯದ ಹಲವು ಗ್ರಾಮಗಳಲ್ಲಿ ರೈತರು ಬಿತ್ತನೆಗೆ ಭೂಮಿ ಹದ ಮಾಡುತ್ತಿದ್ದಾರೆ.
![ಬಿತ್ತನೆಗೆ ಅನ್ನದಾತನ ಭರದ ಸಿದ್ಧತೆ: ಕೊರೊನಾ ಭೀತಿ ನಡುವೆಯೂ ಗರಿಗೆದರಿದ ಕೃಷಿ ಚಟುವಟಿಕೆ ಬಿತ್ತನೆಗೆ ಅನ್ನದಾತನ ಭರದ ಸಿದ್ಧತೆ](https://etvbharatimages.akamaized.net/etvbharat/prod-images/768-512-7563821-383-7563821-1591804320752.jpg)
ರಾಜ್ಯಕ್ಕೆ ಈಗಾಗಲೇ ಮುಂಗಾರು ಪ್ರವೇಶ ಮಾಡಿದೆ. ಜಿಲ್ಲೆಯಲ್ಲಿಯೂ ಕಳೆದ ಒಂದು ವಾರದಿಂದ ಅಲ್ಪ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಕೃಷಿ ಚಟುವಟಿಕೆ ಆರಂಭವಾಗಿದೆ. ಗುರುಮಠಕಲ್ ಪಟ್ಟಣ ಸೇರಿದಂತೆ ವಲಯದ ಹಲವು ಗ್ರಾಮಗಳಲ್ಲಿ ರೈತರು ಬಿತ್ತನೆಗೆ ಭೂಮಿ ಹದ ಮಾಡುತ್ತಿದ್ದು, ಈ ಬಾರಿ ಅಧಿಕ ಪ್ರಮಾಣದಲ್ಲಿ ಮಳೆ ಬರಬಹುದು ಎಂಬ ವಿಶ್ವಾಸ ರೈತರಲ್ಲಿದೆ.
ಗುರುಮಠಕಲ್ ವಲಯದಲ್ಲಿ ಒಟ್ಟು 27000 ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಅದರಲ್ಲಿ 14000 ಹೆಕ್ಟೇರ್ ಮಳೆಯಾಧಾರಿತ ಭೂಮಿಯಾಗಿದೆ. ಈ ವಲಯದಲ್ಲಿ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿ ರೈತರಿಗೆ ಸಹಕಾರ ನೀಡಲು ಕೃಷಿ ಇಲಾಖೆ ಸನ್ನದ್ಧವಾಗಿದೆ. ಈಗಾಗಲೇ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಮಾಡಲು ತೊಗರಿ, ಸಜ್ಜೆ, ಹೆಸರು ಸೇರಿದಂತೆ ಇನ್ನುಳಿದ ಬಿತ್ತನೆ ಬೀಜಗಳನ್ನು ಸರ್ಕಾರ ಸರಬರಾಜು ಮಾಡಿದ್ದು, ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆ ಮಾಡಲಾಗುತ್ತಿದೆ.