ಯಾದಗಿರಿ:ತಾಯಿ ಮಮತೆಗೆ ಸಾಟಿ ಇಲ್ಲ, ಆಕೆಗಿಂತ ಮಿಗಿಲಾದ ದೇವರಿಲ್ಲ ಎನ್ನುವಂತಹ ಮಾತುಗಳನ್ನು ನಾವೆಲ್ಲರೂ ಕೇಳಿಯೇ ಇರುತ್ತೇವೆ. ಇದಕ್ಕೆ ಸಾಕ್ಷಿಯೆಂಬಂತೆ ಜಿಲ್ಲೆಯಲ್ಲಿ ಮಹಾ ತಾಯಿಯೊಬ್ಬಳು ಕಡುಬಡತನದಲ್ಲಿಯೂ ಭಿಕ್ಷೆ ಎತ್ತಿ ಮಗಳಿಗೆ ಕೆಎಎಸ್, ಯುಪಿಎಸ್ಸಿ ಪರೀಕ್ಷೆಗೆ ಸಿದ್ದಗೊಳಿಸಿ, ಮಗಳ ಅದ್ಭುತ ಭವಿಷ್ಯ ರೂಪಿಸಿದ್ದಾಳೆ. ಮನೆ ಮನೆಗೆ ತೆರಳಿ ಭಿಕ್ಷೆ ಎತ್ತುತ್ತಿರುವ ಈ ಮಹಾತಾಯಿಯ ಹೆಸರು ಲಲಿತಮ್ಮ. ತಾಲೂಕಿನ ಹೊಸಳ್ಳಿ ತಾಂಡಾದ ಬಳಿ ಗುಡಿಸಲಿನಲ್ಲಿ ವಾಸಿಸುವ ಈಕೆ, ಗರ್ಭಧರಿಸಿದ 3ನೇ ತಿಂಗಳಿನ ವೇಳೆ ಗಂಡನನ್ನು ಕಳೆದುಕೊಂಡು ಕಡುಕಷ್ಟದಲ್ಲಿ ಜೀವನ ಸಾಗಿಸಿದ್ದಾರೆ.
'ಮಗಳ' ಭವಿಷ್ಯಕ್ಕೆ ಬೆನ್ನುಲುಬಾಗಿ ನಿಂತ 'ಮಹಾತಾಯಿ' ಅಷ್ಟೇ ಅಲ್ಲ, ಪುಟ್ಟ ಕಂದಮ್ಮನನ್ನು ಹೊತ್ತು ಊರೂರು ಅಲೆಯುತ್ತ ಜನರ ಬಳಿ ಭಿಕ್ಷೆ ಎತ್ತಿ ಅಲೆಮಾರಿ ಜೀವನಸಾಗಿಸುತ್ತಿರುವ ಈಕೆ, ಇದ್ದ ಒಬ್ಬ ಮಗಳಿಗೆ ಎಂಎ, ಎಮ್‌ಎಸ್‌ಡಬ್ಲ್ಯೂ ಹಾಗೂ ಕೆಎಎಸ್, ಯುಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕೊಡಿಸಿ ಮಗಳ ಭವಿಷ್ಯ ರೂಪಿಸಿದ್ದಾಳೆ.
ತಾಯಿಗೆ ತಕ್ಕ ಮಗಳಾಗಲಿರುವ ಗಂಗಮ್ಮ:ತಾಯಿ ಆಸೆಯಂತೆ ನಿಷ್ಠೆಯಿಂದ ಓದುತ್ತಿರುವ ಗಂಗಮ್ಮ, ಜಿಲ್ಲೆಯ ಲಿಂಗೇರಿ ಗ್ರಾಮದ ಸರ್ಕಾರಿ ಸ್ಕೂಲ್‌ನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ನಂತರ ಯಾದಗಿರಿ ಪಟ್ಟಣದಲ್ಲಿ ಪಿಯುಸಿ ಓದಿದ್ದಾರೆ. ಗುರುಮಠಕಲ್‌ನಲ್ಲಿ ಡಿಗ್ರಿ ಪಡೆದಿದ್ದಾಳೆ. ಉನ್ನತ ವ್ಯಾಸಾಂಗಕ್ಕಾಗಿ ಕಲಬುರಗಿಗೆ ಬಂದ ಆಕೆ ಎಂಎ ಪದವಿ ಹಾಗೂ ಎಂಎಸ್‌ಡಬ್ಲ್ಯೂ ಶಿಕ್ಷಣ ಮುಗಿಸಿದ್ದಾಳೆ.
ಕ್ಷಣ ಕ್ಷಣಕ್ಕೂ ಅಮ್ಮ ಪಟ್ಟಿರುವ ಕಷ್ಟವನ್ನು ನೆನೆಯುತ್ತಾ, ಅವಳ ಆಸೆಯಂತೆ ದೊಡ್ಡ ಅಧಿಕಾರಿಯಾಗಲು ಹಗಲಿರುಳು ಸ್ಟಡಿ ಮಾಡುತ್ತಿರುವ ಗಂಗಮ್ಮ, ಬಡತನದ ಬೇಗುದಿಯಲ್ಲಿಯೂ ಹಿಂದೆ ಸರಿಯದೆ ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಪಡೆದಿದ್ದಾಳೆ. ಸದ್ಯ ಕೆಎಎಸ್, ಯುಪಿಎಸ್ಸಿ ಪರೀಕ್ಷೆ ಬರೆಯುವ ನಿರೀಕ್ಷೆಯಲ್ಲಿರುವ ಆಕೆ ಏನೇ ಆದ್ರು ದೊಡ್ಡ ಅಧಿಕಾರಿಯಾಗುತ್ತೇನೆ. ಅಮ್ಮ ಪಟ್ಟ ಕಷ್ಟ ವ್ಯರ್ಥವಾಗದಂತೆ ಮಾಡುತ್ತೇನೆ ಎಂಬ ಭರವಸೆ ನೀಡಿದ್ದಾಳೆ.