ಸುರಪುರ(ಯಾದಗಿರಿ):ಕಳೆದ ಏಳು ದಶಕಗಳಿಂದ ಕುಡಿಯುವ ನೀರಿನ ಸೌಲಭ್ಯವಿಲ್ಲದೆ ವಾಸಿಸುತ್ತಿದ್ದ ಶಿಬಾರಬಂಡಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಈಟಿವಿ ಭಾರತ ವರದಿ ಬಿತ್ತರಿಸಿದ ಕೆಲವೇ ದಿನಗಳಲ್ಲಿ ಜನರ ಬಹುದಿನಗಳ ಸಮಸ್ಯೆಗೆ ಪರಿಹಾರ ಸಿಕ್ಕಿದೆ.
ಗ್ರಾಮದಲ್ಲಿನ ಮೂಲಭೂತ ಸಮಸ್ಯೆಗಳ ಕುರಿತು ಮೇ 24 ರಂದು 'ಕುಡಿಯಲು ನೀರಿಲ್ಲ, ಸರಿಯಾದ ರಸ್ತೆಯಿಲ್ಲ: ಇದು ಸುರಪುರದ ಶಿಬಾರಬಂಡಿ ಗ್ರಾಮಸ್ಥರ ಗೋಳು' ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ದಿಂದ ವಿಸ್ತೃತ ವರದಿ ಬಿತ್ತರಿಸಲಾಗಿತ್ತು. ಈ ವರದಿಗೆ ಸ್ಪಂದಿಸಿದ ನಗರಸಭೆ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ಕುಡಿಯಲು ಹಾಗೂ ದಿನ ಬಳಕೆಗೆ ನೀರು ಪೂರೈಸಲು ಆರಂಭಿಸಿದೆ.
ಇದನ್ನು ಓದಿ :ಕುಡಿಯಲು ನೀರಿಲ್ಲ, ಸರಿಯಾದ ರಸ್ತೆಯಿಲ್ಲ: ಇದು ಸುರಪುರದ ಶಿಬಾರಬಂಡಿ ಗ್ರಾಮಸ್ಥರ ಗೋಳು
ಈ ಕುರಿತು ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಮಾತನಾಡಿದ್ದು, ಈಟಿವಿ ಭಾರತ ಒಳ್ಳೆಯ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ಸಮಸ್ಯೆಗಳನ್ನು ಎತ್ತಿ ತೋರಿಸಿ ಪರಿಹಾರಕ್ಕೆ ಅನುವು ಮಾಡಿಕೊಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುರಪುರದ ದಶಕಗಳ ಸಮಸ್ಯೆಗೆ ಬೆಳಕಾದ ಈಟಿವಿ ಭಾರತ ವರದಿ ನಗರಸಭೆ ಪೌರಾಯುಕ್ತ ಜೀವನ್ ಕಟ್ಟಿಮನಿ ಮಾತನಾಡಿ, ಶಿಬಾರ ಬಂಡಿ ಗ್ರಾಮ ಇನ್ನೂ ನಗರಸಭೆ ವ್ಯಾಪ್ತಿಗೆ ಅಧಿಕೃತವಾಗಿ ಸ್ವೀಕರಿಸಿಲ್ಲ. ಆದ್ದರಿಂದ ಸದ್ಯ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದು, ಕೆಲ ದಿನಗಳಲ್ಲಿ ಜಿಲ್ಲಾಧಿಕಾರಿಗಳಿಂದ ಒಪ್ಪಿಗೆ ಪಡೆದು ಗ್ರಾಮವನ್ನು ಒಂದು ವಾರ್ಡಿಗೆ ಸೇರ್ಪಡೆಗೊಳಿಸಿದ ನಂತರ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕುಡಿಯಲು ನೀರು ದೊರಕಿಸಿದ ಈಟಿವಿ ಭಾರತ ವಾಹಿನಿಗೆ ಹಾಗೂ ತಹಶೀಲ್ದಾರರಿಗೆ ಸ್ಥಳೀಯರು ಧನ್ಯವಾದ ತಿಳಿಸಿದ್ದಾರೆ.