ಯಾದಗಿರಿ :ಕ್ವಾರಂಟೈನ್ ಕೇಂದ್ರದಲ್ಲಿ ಹೆರಿಗೆ ನೋವಿನಿಂದ ಒದ್ದಾಡಿದ್ದ ಗರ್ಭಿಣಿಗೆ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಲು ಮುಂದಾಗದೇ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಹೆರಿಗೆ ನೋವಿನಿಂದ ಬಳಲಿದ್ದ ಗರ್ಭಿಣಿಗೆ ಚಿಕಿತ್ಸೆ ನೀಡದೇ ಅಮಾನವೀಯತೆ ಮೆರದ ವೈದ್ಯರು ಜಿಲ್ಲೆಯ ಶಹಪುರ ತಾಲೂಕಿನ ಹೋತಪೇಟೆ ಮೇಲಿನ ತಾಂಡಾದ ಕವಿತಾ ಎಂಬ ಗರ್ಭಿಣಿ ತನ್ನ ಕುಟುಂಬಸ್ಥರೊಂದಿಗೆ ಕಳೆದ ಐದು ದಿನಗಳ ಹಿಂದೆ ಮಹಾರಾಷ್ಟ್ರದ ಪುಣೆಯಿಂದ ಜಿಲ್ಲೆಗೆ ಆಗಮಿಸಿದ್ದರು. ಇವರನ್ನು ಶಹಪುರ ತಾಲೂಕಿನ ಭೀಮರಾಯನ ಬಳಿಯ ಕೇಂದ್ರದಲ್ಲಿ ಕ್ವಾರೆಂಟೈನ್ ಮಾಡಲಾಗಿತ್ತು.
ಏಳು ತಿಂಗಳ ಗರ್ಭಿಣಿ ಕವಿತಾ ಕಳೆದ ರಾತ್ರಿ ಕ್ವಾರೆಂಟೈನ್ ಕೇಂದ್ರದಲ್ಲಿ ಹೆರಿಗೆ ನೋವಿನಿಂದ ನರಳಾಡಿದ್ದು, ಅಲ್ಲಿಯ ಸಿಬ್ಬಂದಿ ಕೋಣೆಯ ಬಾಗಿಲು ತೆರೆಯದೇ ನಿರ್ಲಕ್ಷ ತೋರಿದ್ದಾರೆ. ಇಂದು ಬೆಳಗ್ಗೆ ರಕ್ತಸ್ರಾವದಿಂದ ಬಳಲುತ್ತಿದ್ದ ಕವಿತಾಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಆಕೆಯ ಚಿಕಿತ್ಸೆಗೆ ವೈದ್ಯರು ಮುಂದೆ ಬಾರದೇ ಅಮಾನವೀಯವಾಗಿ ನಡೆದುಕೊಳ್ಳುವ ಮೂಲಕ ನಿರ್ಲಕ್ಷ್ಯ ತೋರಿದ್ದಾರೆ.
ರಕ್ತಸ್ರಾವದಿಂದ ನರಳಾಡುತ್ತಿದ್ದ ಕವಿತಾಗೆ ಚಿಕಿತ್ಸೆ ನೀಡುವಂತೆ ಆಕೆಯ ಸಂಬಂಧಿಕರು ಪರಿ ಪರಿಯಾಗಿ ಕೇಳಿದರೂ ಆಸ್ಪತ್ರೆ ಸಿಬ್ಬಂದಿ ಮಾತ್ರ ಚಿಕಿತ್ಸೆಗೆ ಮುಂದಾಗಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಬೆಳಗ್ಗೆ ೧೧ ಗಂಟೆಯಿಂದ ಸಾಯಾಂಕಾಲ ೪ ಗಂಟೆ ವರೆಗೆ ಗರ್ಭಿಣಿ ಕವಿತಾಗೆ ಚಿಕಿತ್ಸೆ ನೀಡದೆ ಕಾಲಹರಣ ಮಾಡಿ ಕೊನೆಗೆ ಕಲಬುರಗಿ ಜಿಲ್ಲಾಸ್ಪತ್ರೆಗೆ ಶಿಫಾರಸು ಮಾಡುವ ಮೂಲಕ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ ಎಂದು ಕವಿತಾ ಸಂಬಂಧಿಗಳು ಆಸ್ಪತ್ರೆ ಆಡಳಿತ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.