ಯಾದಗಿರಿ: ಸುತ್ತಮುತ್ತಲ ಐದು ಗ್ರಾಮಗಳ ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಹೊಲ, ಗದ್ದೆಗಳಿಗೆ ನೀರುಣಿಸುವ ಗುರುಮಠಕಲ್ ತಾಲೂಕಿನ ಕರಣಗಿ ಗ್ರಾಮದ ದೊಡ್ಡ ಕೆರೆ ಹೂಳೆತ್ತುವ ಕೆಲಸ ಭರದಿಂದ ಸಾಗುತ್ತಿದೆ.
ಗುರುಮಠಕಲ್ ತಾಲೂಕಿನ ಕರಣಗಿ ಗ್ರಾಮದ ದೊಡ್ಡದಾದ ಕೆರೆ ಹೂಳೆತ್ತುವ ಕೆಲಸ ಕಳೆದ ಹಲವಾರು ವರ್ಷಗಳಿಂದ ಕರಣಗಿ ಗ್ರಾಮದ ದೊಡ್ಡ ಕೆರೆಯ ಹೂಳೆತ್ತಿರಲಿಲ್ಲ. ಸರ್ಕಾರಕ್ಕೆ ಹಲವು ಬಾರಿ ಮನವಿ ಕೂಡ ಸಲ್ಲಿಸಲಾಗಿತ್ತು. ಇದನ್ನು ಗಮನಿಸಿದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ 'ನಮ್ಮ ಊರು ನಮ್ಮ ಕೆರೆ' ಯೋಜನೆಯಡಿ ಕೆರೆ ಹೂಳೆತ್ತುವ ಕೆಲಸಕ್ಕೆ ಕೈ ಹಾಕಿದ್ದು, ಅದಕ್ಕೆ ಗ್ರಾಮಸ್ಥರು ಕೂಡ ಸಹಕಾರ ನೀಡಿದ್ದಾರೆ.
ಸುಮಾರು 36 ಎಕರೆ ಪ್ರದೇಶದಲ್ಲಿ ಈ ಕೆರೆಯಿದ್ದು, ಈಗಾಗಲೇ ಸರಿ ಸುಮಾರು ಶೇ 80ರಷ್ಟು ಹೂಳೆತ್ತುವ ಕೆಲಸವಾಗಿದೆ. ಇನ್ನು ಒಂದು ವಾರದಲ್ಲಿ ಹೂಳೆತ್ತುವ ಕೆಲಸ ಕಂಪ್ಲೀಟ್ ಆಗಲಿದ್ದು, ನಮ್ಮ ಊರು ನಮ್ಮ ಕೆರೆ ಯೋಜನೆ ಯಶಸ್ವಿಯಾಗಲಿದೆ. ಈ ಕೆಲಸಕ್ಕೆಂದೇ ಸುಮಾರು 13 ಲಕ್ಷ 50 ಸಾವಿರ ಹಣವನ್ನು ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆ ನೀಡಿದ್ದು, ಇನ್ನುಳಿದಂತೆ ಗ್ರಾಮಸ್ಥರು ಕೂಡ ಕೈ ಜೋಡಿಸಿ ಕೆರೆ ಹೂಳೆತ್ತುವ ಕೆಲಸದಲ್ಲಿ ಭಾಗಿಯಾಗಿದ್ದಾರೆ.
ಈಗಾಗಲೇ ಗ್ರಾಮಸ್ಥರು ಸ್ವತಃ ತಮ್ಮದೇ ಟ್ರ್ಯಾಕ್ಟರ್ಗಳನ್ನು ತೆಗೆದುಕೊಂಡು ಬಂದು ಕೆರೆಯಲ್ಲಿನ ಮಣ್ಣನ್ನು ತಮ್ಮ ಹೊಲ ಗದ್ದೆಗಳಿಗೆ ಹಾಕಿಕೊಳ್ಳುತ್ತಿದ್ದಾರೆ. ಈ ಕೆಲಸಕ್ಕೆ ಐದು ಊರಿನ ಗ್ರಾಮಸ್ಥರು ಸಹಕಾರ ನೀಡಿದ್ದು, ಬೇಸಿಗೆಯಲ್ಲಿ ನೀರಿನ ಅಭಾವ ತಪ್ಪಿಸಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಿಕೊಳ್ಳಲು ಧರ್ಮಸ್ಥಳ ಸಂಘದ ಜೊತೆ ಕೈಜೋಡಿಸಿದ್ದಾರೆ. ಜೊತೆಗೆ ಧರ್ಮಸ್ಥಳ ಸಂಘದ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.