ಕರ್ನಾಟಕ

karnataka

ವಿಶ್ವ ತಾಯಂದಿರ ದಿನದ ವಿಶೇಷ.. ಒಡಹುಟ್ಟಿದವರಿಗೆ ತಾಯಿಯಾದ ಸಹೋದರಿ..

By

Published : May 10, 2020, 4:40 PM IST

ತ್ಯಾಗ ಎನ್ನುವ ಪದದ ಪರ್ಯಾಯ ಅರ್ಥ ಎಂದರೆ ಅದು ತಾಯಿ, ತಾಯಿ ಎಂದರೆ ಕೇವಲ ಹೆರುವವಳು ಮಾತ್ರವಲ್ಲದೆ ಹೊರುವವಳು, ಲಾಲನೆ-ಪಾಲನೆ ಮಾಡುವವಳೂ ತಾಯಿಯೇ ಅಂತಾ ಮಹಾ ತಾಯಿಯೊಬ್ಬಳು ನಮ್ಮ ನಡುವೆ ಇದ್ದಾಳೆ.

Devamma
ದೇವಮ್ಮ

ಯಾದಗಿರಿ/ಸುರಪುರ :ಇಂದು ಜಗತ್ತು ವಿಶ್ವ ತಾಯಂದಿರ ದಿನವನ್ನು ಆಚರಿಸುತ್ತಿದೆ. ಆದರೆ, ಬಹುತೇಕರು ತಮ್ಮನ್ನು ಲಾಲನೆ ಪಾಲನೆ ಮಾಡುವ ಹೆತ್ತವಳನ್ನೇ ಪೂಜಿಸುವ ಧ್ಯಾನಿಸುವ ಅನೇಕರ ಮದ್ಯೆ ತನ್ನ ಒಡ ಹುಟ್ಟಿದವರಿಗೇ ತಾನೇ ತಾಯಿಯಂತೆ ಇಡೀ ಬದುಕನ್ನು ಒಡ ಹುಟ್ಟಿದವರಿಗಾಗಿ ಮೀಸಲಿಟ್ಟು ತನ್ನೆಲ್ಲ ಸುಖ ಸಂತೋಷವನ್ನು ಅವರ ಹಾರೈಕೆಯಲ್ಲಿಯೇ ಕಳೆಯುವ ತ್ಯಾಗಮಯಿ ಹೆಣ್ಣುಮಗಳೊಬ್ಬಳು ಇಂದು ವಿಶ್ವ ತಾಯಂದಿರ ದಿನಾಚರಣೆಯಲ್ಲಿ ಮಾದರಿ ಎನಿಸಿದ್ದಾಳೆ.

ತ್ಯಾಗ ಎನ್ನುವ ಪದದ ಪರ್ಯಾಯ ಅರ್ಥ ಎಂದರೆ ಅದು ತಾಯಿ, ತಾಯಿ ಎಂದರೆ ಕೇವಲ ಹೆರುವವಳು ಮಾತ್ರವಲ್ಲದೆ ಹೊರುವವಳು, ಲಾಲನೆ-ಪಾಲನೆ ಮಾಡುವವಳೂ ತಾಯಿಯೇ ಅಂತಾ ಮಹಾ ತಾಯಿಯೊಬ್ಬಳು ನಮ್ಮ ನಡುವೆ ಇದ್ದಾಳೆ.

ಒಡಹುಟ್ಟಿದವರಿಗೆ ತಾಯಿಯಾದ ಸಹೋದರಿ..

ಸುರಪುರ ತಾಲೂಕಿನ ಅನತಿ ದೂರದಲ್ಲಿರುವ ದೇವಿಕೆರಾ ಎಂಬ ಗ್ರಾಮದಲ್ಲಿ ದೇವಮ್ಮಾ ಬಸವರಾಜ ಕೊಡಿಬೋವಿ ಎಂಬ ಮಹಾತಾಯಿ ಇಂದಿನ ವಿಶ್ವ ತಾಯಂದಿರ ದಿನದ ವಿಶೇಷ ಮಹಿಳೆ. ತನ್ನ ಒಡಹುಟ್ಟಿದ ನಾಲ್ಕು ಜನರಲ್ಲಿ ಇಬ್ಬರು ಹೆಣ್ಣುಮಕ್ಕಳು ಮತ್ತಿಬ್ಬರು ಗಂಡು ಮಕ್ಕಳು ಈ ನಾಲ್ಕೂ ಜನರು ವಿಕಲಾಂಗರು ಮತ್ತು ಬುದ್ಧಿಮಾಂದ್ಯರು. ನಾಲ್ಕು ಜನ ಮಕ್ಕಳು ಹೀಗೆ ಜನಿಸಿದ್ದರಿಂದ ನೊಂದ ಇವರ ತಂದೆ ಕಳೆದ ಹದಿನೈದು ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾದ. ತಾಯಿಯೂ ಮಕ್ಕಳ ಸ್ಥಿತಿ ಕಂಡು ನೊಂದು ಕಳೆದ ಏಳು ವರ್ಷಗಳ ಹಿಂದೆ ಅನಾರೋಗ್ಯಕ್ಕೀಡಾಗಿ ತೀರಿ ಹೋದಳು.

ಅಲ್ಲಿಂದ ನಾಲ್ಕು ಜನ ಬುದ್ಧಿಮಾಂದ್ಯ ಮಕ್ಕಳಿಗೆ ತಾಯಿಯಾಗಿ ತಂದೆಯಾಗಿ ಅವರ ಊಟ ಬಟ್ಟೆ ಸ್ನಾನ ಮತ್ತಿತರೆ ದೈನಂದಿನ ಕ್ರಿಯೆಗಳನ್ನೂ ತಾನೇ ಮಾಡಿಸುವ ಮೂಲಕ ಮಹಾತಾಯಿಯಾಗಿ ಇಂದಿಗೂ ಪೋಷಿಸುತ್ತಿದ್ಧಾಳೆ ದೇವಮ್ಮ ಬಸವರಾಜ ಕೊಡಬೋವಿ.

ದೇವಮ್ಮನಿಗೂ ಸಿಂಧಗಿ ತಾಲೂಕಿನ ಬಳ್ಳುಂಡಗಿ ಎಂಬ ಗ್ರಾಮದ ಬಸವರಾಜ ಎಂಬುವವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆದರೆ ಈ ನಾಲ್ವರ ಲಾಲನೆ ಪಾಲನೆಗಾಗಿ ಗಂಡನನ್ನು ಮನವೊಲಿಸಿ ತನ್ನ ಹುಟ್ಟೂರಾದ ದೇವಿಕೇರಾ ಗ್ರಾಮಕ್ಕೆ ಕರೆತಂದು ಗಂಡ ಬಸವರಾಜ ಕೂಲಿ ಮಾಡಿ ತಂದ ಹಣದಲ್ಲಿಯೇ ಇಡೀ ಮನೆಯ ನಿರ್ವಹಣೆ ನಡೆಸುತ್ತಿದ್ದಾಳೆ. ಸರ್ಕಾರದಿಂದ ಯಾವ ಸಹಾಯವೂ ಇಲ್ಲ. ಸಾಲ ಮಾಡಿ ಕಟ್ಟಿಸಿಕೊಂಡ ಮನೆಯ ಗೋಡೆಯು ಸೀಳಿ ನಿಂತಿವೆ, ಮೇಲೆ ಹಾಕಿದ ತಗಡುಗಳು ತೂತು ಬಿದ್ದು ಮಳೆ ಬಂದರೆ ಎಲ್ಲಾ ನೀರು ಮನೆಯಲ್ಲಿ ಸೋರುತ್ತವೆ ಎಂದು ಹೇಳುವಾಗ ಕಣ್ಣೀರು ಭೂಮಿಗಿಳಿಯುತ್ತಿದ್ದವು. ಈ ದುಷ್ಟ ವ್ಯವಸ್ಥೆ ಇಂತಹ ಕುಟುಂಬಕ್ಕೊಂದು ಸರಿಯಾದ ಸೂರು ಒದಗಿಸಿಲ್ಲ ಎಂಬುದು ನಾಚಿಕೆಗೇಡು.

ಸರ್ಕಾರ ಕೇವಲ ಮಾಶಾಸನ ನೀಡುವುದು ಬಿಟ್ಟರೆ ಬೇರಾವ ಸಹಾಯವು ಇಲ್ಲ. ಪಡಿತರ ಚೀಟಿ ಇದ್ದರೂ ಅಂಗವಿಕಲರಾದ್ದರಿಂದ ಬೆರಳಚ್ಚು ಬಾರದೆ ಅದೂ ದೊರೆಯದು. ಈಗಲಾದರೂ ಸರ್ಕಾರ ನಮಗೆ ಒಂದು ಮನೆ ಕೊಟ್ಟರೆ ಪುಣ್ಯ ಬರಲಿದೆ ಎಂದು ದೇವಮ್ಮ ಸರ್ಕಾರಕ್ಕೆ ಅಂಗಲಾಚುತಿದ್ಧಾಳೆ. ವಿಶ್ವ ತಾಯಂದಿರ ದಿನದಂದು ತಮ್ಮ ತಾಯಿಯರ ಪೂಜಿಸುವ ಗೌರವಿಸುವ ಕರುಣಾಳುಗಳು ಈ ಬುದ್ದಿಮಾಂದ್ಯ ಅಂಗವಿಕಲರ ಪೋಷಣೆ ಮಾಡುತ್ತಿರುವ ಮಹಾ ತಾಯಿಯ ಕುಟುಂಬಕ್ಕೆ ನೆರವಾಗಲೆಂದು ಈಟಿವಿ ಭಾರತ ಹಾರೈಸುತ್ತದೆ.

ABOUT THE AUTHOR

...view details