ಸುರಪುರ: ಕೃಷ್ಣಾ ನದಿಗೆ 2.60 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಪರಿಣಾಮ ನದಿ ನೀರು ದೇವಪುರ ಭಾಗದ ಸುಮಾರು 500 ಎಕರೆ ಜಮೀನುಗಳಿಗೆ ನುಗ್ಗಿದ್ದರಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗುವ ಸಾಧ್ಯತೆಯಿದೆ. ಹಾಗಾಗಿ ರೈತರಲ್ಲಿ ಆತಂಕ ಶುರುವಾಗಿದೆ.
ಕೃಷ್ಣಾ ನದಿಗೆ ನೀರು ಬಿಡುಗಡೆ: ದೇವಪುರದಲ್ಲಿ ನೂರಾರು ಎಕರೆ ಜಮೀನು ಜಲಾವೃತ
ಕೃಷ್ಣಾ ನದಿಗೆ 2.60 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ದೇವಪುರ ಭಾಗದಲ್ಲಿ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದೆ.
ಕೃಷ್ಣಾ ನದಿಗೆ ಹೆಚ್ಚು ನೀರು ಹರಿಸುತ್ತಿರುವುದರಿಂದ ದೇವಪುರದ ಹಳ್ಳಕ್ಕೆ ದೊಡ್ಡ ಪ್ರಮಾಣದಲ್ಲಿ ನೀರು ಹರಿಯುವುದರಿಂದ ದೇವಪುರ, ಕೆಂಪಾಪುರ, ಆಲ್ದಾಳ, ಹಾವಿನಾಳ, ಶೆಳ್ಳಗಿ, ಮುಷ್ಠಹಳ್ಳಿ ಮುಂತಾದ ಗ್ರಾಮಗಳ ನದಿ ದಂಡೆಯಲ್ಲಿರುವ ಸಾವಿರಾರು ಎಕರೆ ಜಮೀನು ಮುಳುಗಡೆಯಾಗುವ ಸಾಧ್ಯತೆಯಿದೆ. ಕಳೆದ ವರ್ಷ ಬಂದ ಪ್ರವಾಹದಿಂದ ಬೆಳೆ ನಷ್ಟಕ್ಕೆ ಒಳಗಾದ ಸಾವಿರಾರು ರೈತರು ಪರಿಹಾರವೂ ಸಿಗದೇ ಕಣ್ಣೀರಿನಲ್ಲಿ ಕೈತೊಳೆದಿದ್ದಾರೆ. ಮತ್ತೆ ಈ ವರ್ಷವೂ ಕೂಡ ಪ್ರವಾಹ ಭೀತಿ ಎದುರಾಗಿರುವುದರಿಂದ ಅವರೆಲ್ಲ ಚಿಂತಾಕ್ರಾಂತರಾಗಿದ್ದಾರೆ.
ಈ ಕುರಿತು ರೈತ ವೀರೇಶ್ ಮುಷ್ಠಹಳ್ಳಿ ಮಾತನಾಡಿ, ಕಳೆದ ವರ್ಷ ನಮ್ಮೆಲ್ಲ ಜಮೀನುಗಳ ಬೆಳೆ ನಷ್ಟವಾದರೂ ಬಿಡಿಗಾಸಿನ ಪರಿಹಾರ ದೊರೆತಿಲ್ಲ. ಇದೀಗ ಮತ್ತೆ ಪ್ರವಾಹದಿಂದ ನಮ್ಮ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಾಶವಾಗುತ್ತಿದೆ. ಈಗಾಗಲೇ ಬೆಳೆಗಳಿಗೆ ಎರಡು ಬಾರಿ ರಸಗೊಬ್ಬರ ಹಾಗೂ ಕ್ರಿಮಿನಾಶಕವನ್ನು ಸಿಂಪಡಿಸಲು ಲಕ್ಷಾಂತರ ರೂ. ಖರ್ಚು ಮಾಡಲಾಗಿದೆ. ಪ್ರವಾಹದಿಂದ ಬೆಳೆ ನಷ್ಟವಾದರೆ ಸಾಲದಿಂದ ರೈತರು ಆತ್ಮಹತ್ಯೆ ಹಾದಿ ಹಿಡಿಯುವ ಅನಿವಾರ್ಯತೆಗೆ ಒಳಗಾಗಲಿದ್ದೇವೆ. ಆದ್ದರಿಂದ ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸುವಂತೆ ಅವರು ಆಗ್ರಹಿಸಿದ್ದಾರೆ.