ಯಾದಗಿರಿ: ಜಿಲ್ಲೆಯ ವಿವಿಧ ತಾಂಡಾಗಳಲ್ಲಿ ಬಂಜಾರ ಸಮುದಾಯದ ಜನ ವಿಭಿನ್ನವಾಗಿ ಬೆಳಕಿನ ಹಬ್ಬವನ್ನು ಆಚರಿಸಿದರು. ಸಮುದಾಯದ ಯುವತಿಯರು, ಮಹಿಳೆಯರು ದೀಪಾವಳಿಯ ವಿಶೇಷ ಆಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ತಾಂಡಾದ ಸೇವಾಲಾಲ್ ದೇವಸ್ಥಾನದೆದುರು ಯುವತಿಯರು ಕೂಡಿಕೊಂಡು ಹಸಿರು, ಹಳದಿ, ಕೆಂಪು, ಗುಲಾಬಿ, ಬಿಳಿ, ನೀಲಿ, ಕೇಸರಿ ಬಣ್ಣದ ಉಡುಪುಗಳನ್ನು ಧರಿಸಿ ತಮಟೆಯ ಶಬ್ದಕ್ಕೆ ಕುಣಿದು, ಸಾಂಪ್ರದಾಯಿಕ ದೀಪಾವಳಿ ಹಾಡುಗಳನ್ನು ಹಾಡುತ್ತಾ, ಹಬ್ಬದ ಸಡಗರದಲ್ಲಿ ತೇಲಾಡಿದರು.
ಅಮಾವಾಸ್ಯೆ ರಾತ್ರಿ ಮುದ್ನಾಳ ದೊಡ್ಡ ತಾಂಡಾದ ನಾಯಕಿ ಮೋತಿಬಾಯಿ ಅವರ ಮನೆಗೆ ತೆರಳಿದ ಯುವತಿಯರು ದೀಪಾವಳಿ ಹಬ್ಬ ಆಚರಿಸಲು ಅನುಮತಿ ಪಡೆದುಕೊಂಡು, ಎಲ್ಲರೂ ಸೇರಿ ಒಟ್ಟಾಗಿ ದೀಪಾವಳಿ ಆಚರಿಸಿದರು. ಯುವಕರು ಹೊಸ ಬಟ್ಟೆ, ತಲೆಗೆ ರುಂಬಾಲು, ಪಂಚೆ ಸೇರಿದಂತೆ ಬಂಜಾರ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಕುಣಿದು ಕುಪ್ಪಳಿಸಿದರು. ಆಕಾಶದಲ್ಲಿ ಚಿತ್ತಾರ ಮೂಡಿಸುವ ಪಟಾಕಿಗಳನ್ನು ಹೊತ್ತಿಸಿದರು.