ಕರ್ನಾಟಕ

karnataka

ETV Bharat / state

ಗುರುಮಠಕಲ್; ಹದಗೆಟ್ಟ ರಸ್ತೆಗಳು.. ಅಧಿಕಾರಿಗಳ ಜಾಣ ಕುರುಡು - ಗುರುಮಠಕಲ್ ಪಟ್ಟಣ

ಗುರುಮಠಕಲ್ ಪಟ್ಟಣದಲ್ಲಿ ಕೆಲ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸ್ಥಳೀಯರು ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ರಸ್ತೆ ಕಾಮಗಾರಿಗೆ ಕಾಳಜಿ ತೋರುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Damaged road in Gurumathkal town
ಗುರುಮಠಕಲ್ ಪಟ್ಟಣದಲ್ಲಿ ಹದಗೆಟ್ಟ ರಸ್ತೆ

By

Published : Aug 22, 2020, 11:48 PM IST

ಗುರುಮಠಕಲ್:ಪಟ್ಟಣದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಬಸ್ ನಿಲ್ದಾಣ ಮಾರ್ಗ ಹಾಗೂ ಅಂಬಿಗರ ಚೌಡಯ್ಯ ವೃತ್ತದ ರಸ್ತೆಯವರೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ವಾಹನ ಸವಾರರು ನಿತ್ಯ ಪರದಾಡುವಂತಾಗಿದ್ದು, ಹದಗೆಟ್ಟ ರಸ್ತೆ ದುರಸ್ತಿಗೊಳಿಸುವಂತೆ ಸ್ಥಳೀಯರು ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ರಸ್ತೆ ಕಾಮಗಾರಿಗೆ ಕಾಳಜಿ ತೋರುತ್ತಿಲ್ಲ.

ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದ ನಗರದ ಬಹುತೇಕ ರಸ್ತೆಗಳು ಕೆಸರುಮಯವಾಗಿವೆ. ಎಲ್ಲ ಬಡಾವಣೆಗಳ ರಸ್ತೆಗಳಲ್ಲಿ ಯುಜಿಡಿ, ಒಳಚರಂಡಿಗೆ ಮಾಡಿದ ಪೈಪ್‌ಲೈನ್‌ ಕಾಮಗಾರಿಗಳಿಂದ ಗುಂಡಿಗಳು ಬಿದ್ದಿದ್ದು, ಮಳೆ ನೀರು ತುಂಬಿ ಗುಂಡಿಗಳು ಕಾಣಿಸದಂತಾಗಿದೆ.

ಗುರುಮಠಕಲ್ ಪಟ್ಟಣದಲ್ಲಿ ಹದಗೆಟ್ಟ ರಸ್ತೆ

ಪ್ರತಿನಿತ್ಯ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿದ್ದು, ವಾಹನ ಸವಾರರಂತೂ ಸರ್ಕಸ್‌ ಮಾಡಿಕೊಂಡು ಎದ್ದು ಬಿದ್ದು ಓಡಾಡುತ್ತಿದ್ದಾರೆ. ತಾಲೂಕಾಡಳಿತವಾಗಲಿ, ಪುರಸಭೆಯಾಗಲಿ ಸಮಸ್ಯೆ ಸರಿಪಡಿಸದೆ, ಜಾಣ ಕುರುಡು ಪ್ರದರ್ಶಿಸುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅವೈಜ್ಞಾನಿಕ ಯುಜಿಡಿ ಕಾಮಗಾರಿ: ನಗರದಲ್ಲಿ ಕಳೆದೆರಡು ವರ್ಷಗಳ ಹಿಂದೆ ಯುಜಿಡಿ ಕಾಮಗಾರಿ ಮುಗಿದಿದ್ದರೂ ರಸ್ತೆಗಳು ಮಾತ್ರ ಸುಧಾರಿಸಿಲ್ಲ. ರಸ್ತೆ ಮಧ್ಯದಲ್ಲಿ ಪೈಪ್‌ ಹಾಕಲು ಮತ್ತು ಮ್ಯಾನ್‌ ಹೋಲ್‌ ಮಾಡಲು ರಸ್ತೆ ಅಗೆದು ಹಾಳು ಮಾಡಲಾಗಿದೆ. ರಸ್ತೆ ಸಮತಟ್ಟು ಇಲ್ಲದಿರುವ ಕಾರಣ ಮಳೆ ನೀರು ನಿಂತು ರಸ್ತೆ ಯಾವುದು ಗುಂಡಿ ಯಾವುದು ಎಂದು ಹುಡುಕುವಂತಾಗಿದೆ. ಅಮಾಯಕರು ಗುಂಡಿಯೊಳಗೆ ಬಿದ್ದು ಕೈಕಾಲು ಮುರಿದುಕೊಂಡಿದ್ದೂ ಇದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ರಸ್ತೆ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡು ಸಮರ್ಪಕ ರಸ್ತೆ ನಿರ್ಮಿಸಬೇಕು ಎಂದು ಪುರಸಭೆ ಸದಸ್ಯ ಎಸ್.ಕೆ. ಮೈನುದ್ದಿನ್ ಆಗ್ರಹಿಸಿದ್ದಾರೆ.

ABOUT THE AUTHOR

...view details