ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ಅಮಲಿಹಾಳ ಗ್ರಾಮದ ದೇವಸ್ಥಾನದ ಪ್ರವೇಶಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕು ದಿನಗಳಿಂದ ಸವರ್ಣಿಯರು ಹಾಗೂ ದಲಿತರ ಮಧ್ಯೆ ಏರ್ಪಟ್ಟಿದ್ದ ಕಲಹ ಶನಿವಾರ ವಿಕೋಪಕ್ಕೆ ಹೋಗಿದ್ದು, ಎರಡೂ ಗ್ರಾಮಗಳಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ.
ಅಮಲಿಹಾಳ ಗ್ರಾಮದಲ್ಲಿರುವ ಹನುಮಂತ ದೇವಸ್ಥಾನದ ಪ್ರವೇಶಕ್ಕೆ ಹೂವಿನಹಳ್ಳಿ ಗ್ರಾಮದ ದಲಿತರಿಗೆ ನಿರಾಕರಣೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕಲಹ ಏರ್ಪಟಿತ್ತು. ಇದಕ್ಕೆ ಸಂಬಂಧಿಸಿದಂತೆ ತಾಲೂಕು ಕೇಂದ್ರ ಸುರಪುರದಲ್ಲಿ ವಿವಿಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿ ಘಟನೆಯನ್ನು ಖಂಡಿಸಿದ್ದರು.
ಅಮಲಿಹಾಳ ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಎಸ್ಪಿ ವೇದಮೂರ್ತಿ ಅವರು ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ಮಾಡಿದ್ದರೂ, ಮತ್ತೆ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಮನಗಂಡ ಜಿಲ್ಲಾಡಳಿತ ಎರಡೂ ಗ್ರಾಮಗಳಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದು, ಪೊಲೀಸರ ದಂಡೇ ಗ್ರಾಮಗಳಲ್ಲಿ ಬೀಡುಬಿಟ್ಟಿದೆ.
ಸಂಧಾನ ಯಶಸ್ವಿ: ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದ ತಂಡ ಗ್ರಾಮಸ್ಥರ ಮನವೊಲಿಸಿ ಪೊಲೀಸ್ ಭದ್ರತೆಯಲ್ಲಿ ದಲಿತ ಕುಟುಂಬದ ಸುಮಾರು ಎಂಟು ಜನರನ್ನು ಪೊಲೀಸ್ ಭದ್ರತೆಯಲ್ಲಿ ದೇವಸ್ಥಾನಕ್ಕೆ ಕರೆದುಕೊಂಡು ಬರುವ ಮೂಲಕ ಸ್ವಲ್ಪ ಸಮಾಧಾನದ ಘಟನೆಗೆ ನಾಂದಿ ಹಾಡಿದ್ದಾರೆ. ಆದರೆ, ಎರಡೂ ಗ್ರಾಮಗಳಲ್ಲಿ ಪರಿಸ್ಥಿತಿ ಇನ್ನೂ ಬೂದಿಮುಚ್ಚಿದ ಕೆಂಡದಂತ್ತಿದ್ದು, ಸಿಪಿಐ ಸುನೀಲ ಮೂಲಿಮನಿ, ಬಾಪುಗೌಡ ಪಾಟೀಲ, ದೌಲತ್ ಎನ್.ಕೆ. ನೇತೃತ್ವದಲ್ಲಿ ಪಿಎಸ್‌ಐ ಸುರೇಶಕುಮಾರ ಹಾಗೂ ಗಜಾನಂದ ಬಿರಾದಾರ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದಾರೆ.
ಇದನ್ನೂ ಓದಿ:'ಅವರ ಒಳಉಡುಪು ಕೇಸರಿ': ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಪಿಎಫ್‌ಐ ನಾಯಕನ ವಿವಾದಿತ ಹೇಳಿಕೆ