ಯಾದಗಿರಿ: ಜಿಲ್ಲೆಯ ರೈತರಿಗೆ ಮಳೆ ಬಂದರೂ ಶಾಪ, ಬಾರದಿದ್ದರೂ ಶಾಪ ಎಂಬಂತಹ ಪರಿಸ್ಥಿತಿ ಎದುರಾಗಿದೆ. ಕಾರಣ, ಇಲ್ಲಿಯವರೆಗೆ ಬರಗಾಲ ಎದುರಿಸಿ ಹೈರಾಣಾಗಿದ್ದ ಅನ್ನದಾತ ಇದೀಗ ವರುಣನ ಆರ್ಭಟಕ್ಕೆ ಸುಸ್ತಾಗಿ ಹೋಗಿದ್ದಾನೆ.
ಸುರಪುರ, ಶಹಾಪುರ ವಡಗೇರಾ ತಾಲೂಕಿನ ಹಲವು ಗ್ರಾಮಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ರೈತರ ಬೆಳೆಗಳು ಸಂಪೂರ್ಣ ನಾಶವಾಗಿವೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ವಿವಿಧ ಬೆಳೆಗಳು ವರುಣನ ಅವಾಂತರದಿಂದಾಗಿ ನೆಲಕಚ್ಚಿವೆ. ಇದು, ರೈತರ ವರ್ಷದ ಆದಾಯಕ್ಕೆ ಕೊಡಲಿ ಪೆಟ್ಟು ನೀಡಿದೆ. ಕಳೆದ ವರ್ಷ ಕೂಡ ಕೃಷ್ಣಾ ನದಿ ಪ್ರವಾಹದಿಂದ ಬೆಳೆ ನಷ್ಟ ಅನುಭವಿಸಿದ್ದ ರೈತರು, ಪರಿಹಾರ ಹಣ ಪಡೆಯುವಲ್ಲಿ ಸಫಲನಾಗಿಲ್ಲ. ಹೀಗಿರುವಾಗ ಈ ವರ್ಷವೂ ಅನಾಹುತಗಳು ಅನುಕ್ರಮವಾಗಿ ಮುಂದುವರೆಯುತ್ತಿದ್ದು ರೈತರು ಅಸಹಾಯಕರಾಗಿ ತಲೆ ಮೇಲೆ ಕೈ ಇಟ್ಟು ಕುಳಿತಿದ್ದಾರೆ.
ಸರ್ಕಾರದ ಪರಿಹಾರವೇ ಗತಿ
ಧಾರಾಕಾರ ಮಳೆಯಿಂದ ಜಮೀನಿನಲ್ಲಿ ರೈತರಿಗೆ ಕಾಲಿಡಲೂ ಆಗುತ್ತಿಲ್ಲ. ಬೆಳೆದ ಬೆಳಗಳು ಸಂಪೂರ್ಣ ನೀರಲ್ಲಿ ಮುಳುಗಿ ಕೊಳೆತು ಹೋಗುತ್ತಿವೆ. ಇದೆಲ್ಲದರಿಂದ ಕಂಗಾಲಾಗಿರುವ ರೈತ, 'ಕಳೆದ ವರ್ಷ ಕೂಡಾ ಇದೇ ರೀತಿಯ ಬೆಳೆ ಹಾನಿಗೊಳಗಾಗಿ ಮಾಡಿದ ಸಾಲ ತೀರಿಲ್ಲ. ಈ ವರ್ಷವಾದ್ರೂ ಉತ್ತಮ ಬೆಳೆ ಬರಲಿ ಅಂತ ಸಾಲ ಮಾಡಿ ರಸಗೊಬ್ಬರ, ಕ್ರಿಮಿನಾಶಕ ಸಿಂಪಡಣೆ ಮಾಡಿ ಬೆಳೆ ಬೆಳೆದಿದ್ದೆವು. ಆದ್ರೀಗ ಮತ್ತೆ ಹಳೆಯ ಪರಿಸ್ಥಿತಿಯೇ ಉದ್ಭವಿಸಿರುವುದರಿಂದ ನಮಗೆಲ್ಲಾ ಸರ್ಕಾರದ ಪರಿಹಾರವೇ ಗತಿ' ಎನ್ನುತ್ತಿದ್ದಾರೆ.