ಯಾದಗಿರಿ:ಮುಂಬೈನಿಂದ ಜಿಲ್ಲೆಗೆ ಆಗಮಿಸಿದ್ದ ಎರಡು ವರ್ಷದ ಮಗುವಿಗೆ ಕೊರೊನಾ ಸೊಂಕು ತಗುಲಿರುವುದು ಧೃಡಪಟ್ಟಿದ್ದು, ಅಧಿಕಾರಿಗಳು ಮಗುವಿನ ಪೋಷಕರ ಸ್ಯಾಂಪಲ್ ಸಂಗ್ರಹಿಸಿದ್ದಾರೆ.
ಜಿಲ್ಲೆಯ ಗುರಮಿಠಕಲ್ ತಾಲೂಕಿನ ಚಿನ್ನಾಕಾರ ಗ್ರಾಮದ ದಂಪತಿ ಮಗುವಿಗೆ ವೈರಸ್ ತಾಗಿದ್ದು, ಪಿ-1,256 ಎಂದು ಹೆಸರಿಸಲಾಗಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಮೇ 11ರಂದು ಮುಂಬೈನಿಂದ 11 ಜನ ಖಾಸಗಿ ವಾಹನದ ಮೂಲಕ ಜಿಲ್ಲೆಗೆ ಆಗಮಿಸಿದ್ದರು. ಮುಂಬೈನಿಂದ ಆಗಮಿಸಿದ ಅವರನ್ನು ತಪಾಸಣೆ ಮಾಡಿದ ಬಳಿಕ ತಾಲೂಕಿನ ಗುಂಜನೂರ ಕೇಂದ್ರದಲ್ಲಿ ಕ್ವಾರೆಂಟೈನ್ ಮಾಡಲಾಗಿತ್ತು.
ಈ 11 ಜನರ ಪೈಕಿ ಚಿನ್ನಾಕಾರ ಗ್ರಾಮದ ದಂಪತಿಯ ಎರಡು ವರ್ಷದ ಮಗುವಿಗೆ ಪಾಸಿಟಿವ್ ವರದಿ ಬಂದಿದ್ದು, ಮಗುವಿನ ತಂದೆ- ತಾಯಿಯನ್ನ ನೂತನ ಜಿಲ್ಲಾಸ್ಪತ್ರೆಯ ಕೋವಿಡ್ 19 ವಾರ್ಡ್ಗೆ ದಾಖಲಿಸಲಾಗಿದೆ.
ಹಸಿರು ವಲಯ ಯಾದಗಿರಿಗೆ ಅಂತಾರಾಜ್ಯಗಳಿಂದ ಆಗಮಿಸುತ್ತಿರುವ ವಲಸೆ ಕೂಲಿ ಕಾರ್ಮಿಕರಲ್ಲಿಯೇ ಈ ಡೆಡ್ಲಿ ಕೊರೊನಾ ಸೋಂಕು ಪತ್ತೆ ಆಗುತ್ತಿರುವುದರಿಂದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ.