ಯಾದಗಿರಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆ ಹೊತ್ತಿ ಉರಿದು ಗಂಡ, ಹೆಂಡತಿ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಗುರುಮಠಕಲ್ ಸಮೀಪದ ಸೈದಾಪುರದಲ್ಲಿ ಇಂದು ಬೆಳಗ್ಗೆ ನಡೆದಿದೆ. ಮೃತ ದಂಪತಿಯನ್ನು ರಾಘವೇಂದ್ರ ಮತ್ತು ಪತ್ನಿ ಶಿಲ್ಪಾ ಎಂದು ಗುರುತಿಸಲಾಗಿದೆ. ರಾಘವೇಂದ್ರ ಅವರ ತಂದೆ, ತಾಯಿ ಮತ್ತು ಪುತ್ರರಿಬ್ಬರನ್ನು ರಕ್ಷಿಸಲಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಯಾದಗಿರಿಯಲ್ಲಿ ದಂಪತಿ ಸಜೀವ ದಹನ
ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿಗೆ ಸಿಲುಕಿ ದಂಪತಿ ಮೃತಪಟ್ಟಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ದಂಪತಿ ವಾಸವಿದ್ದ ಮೂರು ಅಂತಸ್ತಿನ ಕಟ್ಟಡದಲ್ಲಿ ಒಂದು ಅಂತಸ್ತು ಮನೆ ಹಾಗೂ ಇನ್ನೆರಡು ಅಂತಸ್ತು ಬಟ್ಟೆ ಅಂಗಡಿ ಇತ್ತು. ಘಟನೆ ನಡೆದಾಗ ರಾಘವೇಂದ್ರ ಮತ್ತು ಪತ್ನಿ ಮೂರನೇ ಅಂತಸ್ತಿನಲ್ಲಿ ವಾಸವಿದ್ದರು. ಇಂದು ಬೆಳಿಗ್ಗೆ 4 ಗಂಟೆಗೆ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ಬಟ್ಟೆ ಅಂಗಡಿ ಮತ್ತು ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಸಂದರ್ಭದಲ್ಲಿ ದಂಪತಿ ಮನೆಯಿಂದ ಹೊರಬರಲಾಗದೆ ಸಜೀವ ದಹನವಾಗಿದ್ದಾರೆ. ಘಟನೆ ತಿಳಿದು ಸ್ಥಳಕ್ಕಾಗಮಿಸಿದ್ದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಅಗ್ನಿ ನಂದಿಸಿದರು. ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಲಾರಿಯಲ್ಲಿ ಅಕ್ರಮ ಮದ್ಯ ಸಾಗಾಟ, ಚಾಲಕ ಸೆರೆ; ₹47 ಲಕ್ಷ ಮೌಲ್ಯದ ಮಾಲು ವಶ