ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಕೊರೊನಾ ವಾರಿಯರ್ ಒಬ್ಬರು ಬಲಿಯಾದ ಘಟನೆ ನಡೆದಿದೆ.
ತಾಲೂಕಿನ ಕೌಳೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಸ್ಟಾಪ್ ನರ್ಸ್ ಗೀತಾ ಮಹೇಶ್ (32) ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ 10 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎಂಟು ದಿನಗಳ ಹಿಂದೆ ಅವರ ಪತಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು.
ದಂಪತಿ ಯಾದಗಿರಿ ನೂತನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಎರಡು ದಿನಗಳ ಹಿಂದೆ ಡಿಸ್ಚಾರ್ಜ್ ಆಗಿದ್ದರು. ಅಸ್ತಮಾದಿಂದ ಬಳಲುತ್ತಿದ್ದ ಗೀತಾ ಅವರನ್ನ ಅನಾರೋಗ್ಯ ನಿಮಿತ್ತ ನಿನ್ನೆ ರಾತ್ರಿ ಮತ್ತೆ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ತೀವ್ರ ಉಸಿರಾಟದ ತೊಂದರೆಯಿಂದ ಇಂದು ಬೆಳಗಿನ ಜಾವ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಕೊರೊನಾ ವಾರಿಯರ್, ಸ್ಟಾಪ್ ನರ್ಸ್ ಗೀತಾ ಅವರ ಸಾವಿಗೆ ಆರೋಗ್ಯ ಇಲಾಖೆ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಪರಿಹಾರ ಹಾಗೂ ಸವಲತ್ತುಗಳನ್ನ ಶೀಘ್ರವಾಗಿ ತಲುಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.