ಯಾದಗಿರಿ:ಇಲ್ಲಿನಅಲ್ಲಿಪುರ ತಾಂಡಾದಲ್ಲಿ ಕೊರೊನಾ ಮಹಾಮಾರಿ ಹಿನ್ನೆಲೆ ನೂರಾರು ಕನಸುಗಳನ್ನು ಹೊತ್ತು ಸಪ್ತಪದಿ ತುಳಿಯಬೇಕಿದ್ದ ಯುವತಿಯ ಮದುವೆ ಕನಸು ನುಚ್ಚು ನೂರಾಗಿದೆ.
ಅಲ್ಲಿಪುರ ತಾಂಡಾದ ವೆಂಕಟೇಶ್ವರ ನಗರದ ನಿವಾಸಿ 19 ವರ್ಷದ ಯುವತಿಯ ಮದುವೆ ನಾಳೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಭೋಜನಾಯಕ ತಾಂಡಾದಲ್ಲಿ ನಡೆಯಬೇಕಿತ್ತು. ಆದ್ರೆ ಸೋಮವಾರದ ಹೆಲ್ತ್ ಬುಲೆಟಿನ್ನಲ್ಲಿ ಯುವತಿಯ ಸಹೋದರಿ ಸೇರಿದಂತೆ ಆಕೆಯ ತಂದೆಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ
ಇತ್ತೀಚೆಗೆ ಮಹರಾಷ್ಟ್ರದಿಂದ ಆಗಮಿಸಿದ್ದ ಇವರನ್ನು ಜಿಲ್ಲಾಡಳಿತ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರಿಸಿತ್ತು. ಮೇ 31ರಂದು ಸಾಂಸ್ಥಿಕ ಕ್ವಾರಂಟೈನ್ನಿಂದ ಇವರನ್ನ ಹೋಮ್ ಕ್ವಾರಂಟೈನ್ಗೆ ಕಳಿಸಲಾಗಿತ್ತು. ಹೋಮ್ ಕ್ವಾರಂಟೈನ್ನಲ್ಲಿದ್ದುಕೊಂಡೇ ಯುವತಿಯ ಕುಟುಂಬಸ್ಥರು ಮಗಳ ಮದುವೆಗೆ ತಯಾರಿ ಮಾಡಿಕೊಂಡಿದ್ದರು. ಆದರೆ ತಂದೆ ಹಾಗೂ ಸಹೋದರಿಯಲ್ಲಿ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮದುವೆ ರದ್ದಾಗಿದೆ.
ಇವರಿಬ್ಬರಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದ್ದರಿಂದ ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿ ಇವರನ್ನು ನಿಗದಿತ ಕೋವಿಡ್-19 ಆಸ್ಪತ್ರೆಗೆ ಕರೆ ತರಲು ಕಳೆದ ಎರಡು ದಿನಗಳಿಂದ ಹರಸಾಹಸ ಪಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಾಗಲು ಒಪ್ಪದ ತಂದೆ-ಮಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ ಕೈಗೆ ಸಿಗದೆ ಗ್ರಾಮದಲ್ಲೇ ತಲೆಮರೆಸಿಕೊಂಡಿದ್ದರಂತೆ. ಇಂದು ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕು ತಗುಲಿದ ತಂದೆ-ಮಗಳ ಮನ ಪರಿವರ್ತನೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.