ಯಾದಗಿರಿ : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಈಗಾಗಲೇ ಬಿಜೆಪಿ ಹೊರತುಪಡಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸಾಕಷ್ಟು ಅಭ್ಯರ್ಥಿಗಳನ್ನು ಬಿಡುಗಡೆ ಮಾಡಿವೆ. ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡು ಹಂತದ ಪಟ್ಟಿ ಬಿಡುಗಡೆ ಮಾಡಿದ್ದು, ಮೊದಲ ಹಂತದ ಪಟ್ಟಿಯಲ್ಲಿ ಶಹಾಪುರ ಕ್ಷೇತ್ರಕ್ಕೆ ಹಾಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮತ್ತು ಸುರಪುರ ಕ್ಷೇತ್ರಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ಯಾದಗಿರಿಗೆ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಮತ್ತು ಗುರುಮಠಕಲ್ ಕ್ಷೇತ್ರಕ್ಕೆ ಬಾಬುರಾವ್ ಚಿಂಚನಸೂರ್‌ಗೆ ಕಾಂಗ್ರೆಸ್ ಮಣೆ ಹಾಕಿದೆ.
ಗುರುಮಠಕಲ್ ಕ್ಷೇತ್ರಕ್ಕೆ 8 ಜನ ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಬಾಬುರಾವ್ ಚಿಂಚನಸೂರು ಅವರಿಗೆ ಟಿಕೆಟ್ ಸಿಕ್ಕಿದೆ. ಚಿಂಚನಸೂರು ಅವರು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಹೀಗಾಗಿ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಸಾಧ್ಯತೆ ಕಂಡುಬಂದಿದೆ. ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರು ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಪ್ರಬಲ ಎದುರಾಳಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಕೋಲಿ ಸಮಾಜಕ್ಕೆ ಟಿಕೆಟ್ ನೀಡುತ್ತಾ ಬಂದಿವೆ. ಇಲ್ಲಿ ಅಲ್ಪಸಂಖ್ಯಾತರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರವು ಯಾದಗಿರಿ ತಾಲ್ಲೂಕಿನ ಸೈದಾಪುರ, ಬಳಿಚಕ್ರ ಹೋಬಳಿ ವ್ಯಾಪ್ತಿಯ ಗ್ರಾಮಗಳನ್ನು ಒಳಗೊಂಡಿದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಗುರುಮಠಕಲ್ 2018ರಲ್ಲಿ ಜೆಡಿಎಸ್ ಪಾಲಾಗಿತ್ತು. ಬಾಬುರಾವ್ ಚಿಂಚನಸೂರು 2018ರಲ್ಲಿ 24,480 ಮತಗಳಿಂದ ಸೋತ ಬಳಿಕ ಬಿಜೆಪಿ ಸೇರಿದ್ದರು. ಐದು ಬಾರಿ ಶಾಸಕರಾಗಿರುವ ಇವರು ಸಪ್ತ ಖಾತೆಗಳ ಸಚಿವ ಎಂದೇ ಖ್ಯಾತಿ ಪಡೆದಿದ್ದಾರೆ.
ಗುರುಮಠಕಲ್ ಕ್ಷೇತ್ರದ ಮತದಾರರ ವಿವರ: ಪುರುಷರು 1,20,852 ಮತ್ತು ಮಹಿಳೆಯರು 1,21,382 ಒಟ್ಟು 2,42,234 ಮತದಾರರಿದ್ದಾರೆ. ಬಾಬುರಾವ್ ಚಿಂಚನಸೂರ್ ಅವರು ಒಟ್ಟು 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ 2 ಅವಧಿಗೆ (1989 ಮತ್ತು 1994), ಗುರುಮಠಕಲ್ ವಿಧಾನಸಭಾ ಕ್ಷೇತ್ರದಿಂದ 2 ಅವಧಿಗೆ (2008-2013 ಮತ್ತು 2013-2018) ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು ಜವಳಿ ಬಂದರು ಮತ್ತು ಒಳನಾಡು ಹಾಗೂ ಸಾರಿಗೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಸಿದ್ದರಾಮಯ್ಯ ನೇತೃತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ, 29 ಆಗಸ್ಟ್ 2018 ರಂದು ಬಿಜೆಪಿ ಸೇರಿದ್ದರು.
2018ರಲ್ಲಿ ಚಿಂಚನಸೂರ್ ಬಿಜೆಪಿ ಸೇರಿದ ನಂತರ, 2022ರ ಜುಲೈ 30ರಂದು ಎಂಎಲ್‌ಸಿ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿತ್ತು. 2022ರ ಆಗಸ್ಟ್ 5ರಂದು, ವಿಧಾನ ಪರಿಷತ್ತಿನ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. 2023ರ ಮಾರ್ಚ್ 20ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2023ರ ಮಾರ್ಚ್ 22ರಂದು ಮತ್ತೆ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಈಗ ಚಿಂಚನಸೂರ್‌ಗೆ ಕೈ ಪಕ್ಷ ಟಿಕೆಟ್ ನೀಡಿದ್ದು, ಗುರುಮಠಕಲ್ ಕ್ಷೇತ್ರದಿಂದ ಸ್ಪರ್ಧಿಸಲು ಅಣಿಯಾಗಿದ್ದಾರೆ.