ಯಾದಗಿರಿ : ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಉಂಟಾದ ಬೆಂಕಿ ಅವಘಡದಲ್ಲಿ ಮೃತಪಟ್ಟ 15 ಜನರ ಕುಟುಂಬದ ಸದಸ್ಯರಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಚೆಕ್ ಅನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೀಮಂತದ ಸಂಭ್ರಮದಲ್ಲಿದ್ದ ಮನೆಯಲ್ಲಿ ಸಿಲಿಂಡರ್ ದುರಂತದಿಂದ ಸೂತಕದ ಛಾಯೆ ಆವರಿಸಿದೆ. ಗಾಯಗೊಂಡವರಲ್ಲಿ ಸುಮಾರು 15 ಮಂದಿ ಮೃತಪಟ್ಟಿರುವುದು ತುಂಬಾ ದುಃಖದ ಸಂಗತಿ. ಮೃತರ ಕುಟುಂಬದ ನೆರವಿಗೆ ಸರ್ಕಾರ ಇರಲಿದೆ ಎಂದು ಅಭಯ ನೀಡಿದರು.
ಈ ದುರ್ಘಟನೆ ನಡೆದ ತಕ್ಷಣ ಸಚಿವರು, ಶಾಸಕರು, ಅಧಿಕಾರಿಗಳು ಆಸ್ಪತ್ರೆಯಲ್ಲಿ ಗಾಯಾಳುಗಳ ಚಿಕಿತ್ಸೆಗೆ ಯಾವುದೇ ಲೋಪವಾಗದಂತೆ ಆಸ್ಪತ್ರೆಯ ಉನ್ನತ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಸಾಕಷ್ಟು ಪ್ರಯತ್ನ ಮಾಡಿರುವುದಾಗಿ ಹೇಳಿದ್ದಾರೆ. ಕೆಲ ಗಾಯಾಳುಗಳು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ ಎಂದರು. ಈ ದುರಂತದಲ್ಲಿ ಮಡಿದವರ ಮಕ್ಕಳ ವಿದ್ಯಾಭ್ಯಾಸಕ್ಕೆ ತಕ್ಕಂತೆ ಸರ್ಕಾರಿ ನೌಕರಿ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಇದೇ ವೇಳೆ ಸಿಎಂ ಅಭಯ ನೀಡಿದರು.