ಯಾದಗಿರಿ:ಇಲ್ಲಿನ ಫುಟ್ಪಾತ್ ಮೇಲೆ ಅನಧಿಕೃತವಾಗಿ ತೆರೆಯಲಾದ ಅಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸುವ ಕಾರ್ಯಕ್ಕೆ ಜಿಲ್ಲೆಯ ಗುರಮಿಠಕಲ್ ಪಟ್ಟಣದ ಪುರಸಭೆ ಅಧಿಕಾರಿಗಳು ಮುಂದಾದರು.
ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಲಾಯಿತು. ಪಟ್ಟಣದ ಪ್ರಮುಖ ರಸ್ತೆಗಳ ಪಕ್ಕದಲ್ಲಿ ಯಾವುದೇ ಪರವಾನಿಗೆ ಪಡೆಯದೇ ತೆರೆಯಲಾದ ನೂರಾರು ಅಂಗಡಿಮುಗಟ್ಟುಗಳಿಂದ ಸಾರ್ವಜನಿಕರ ಹಿತಾಸಕ್ತಿ ಹಾಗೂ ವಾಹನ ಸಂಚಾರ ಸೇರಿದಂತೆ ರಸ್ತೆ ಮೇಲೆ ಓಡಾಡುವ ಪಾದಚಾರಿಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅನಧಿಕೃತ ಕಟ್ಟಡಗಳನ್ನ ನೆಲಸಮ ಮಾಡಲಾಯಿತು.
ಪಟ್ಟಣದ 30ಕ್ಕೂ ಹೆಚ್ಚು ಅನಧಿಕೃತ ಅಂಗಡಿ ಮುಗಟ್ಟುಗಳನ್ನು ಜೆಸಿಬಿ ಮೂಲಕ ಪುರಸಭೆ ಅಧಿಕಾರಿಗಳು ನೆಲಸಮ ಮಾಡಿದರು. ಯಾವುದೇ ಮಾಹಿತಿ ಮತ್ತು ನೊಟೀಸ್ ನೀಡದೆ ಅಧಿಕಾರಿಗಳು ಏಕಾಏಕಿ ಅಂಗಡಿ ಮುಗಟ್ಟುಗಳನ್ನು ತೆರವುಗೊಳಿಸುತ್ತಿದ್ದಾರೆ ಎಂದು ಅಂಗಡಿ ಮಾಲೀಕರು ಅಧಿಕಾರಿಗಳ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೋಲಿಸರ ಸಹಾಯದಿಂದ ತೆರವು ಕಾರ್ಯಕ್ಕೆ ಮುಂದಾದ ಅಧಿಕಾರಿಗಳ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬೀದಿ ವ್ಯಾಪಾರಿಗಳು, ಅಧಿಕಾರಿಗಳು ತಮಗೆ ಬೇಕಾದವರ ಅನಧಿಕೃತ ಅಂಗಡಿಗಳನ್ನು ತೆರವು ಮಾಡದೆ, ಬೇಕಾಬಿಟ್ಟಿಯಾಗಿ ಈ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ತೆರವು ಮಾಡುವುದಿದ್ದರೆ ಪಟ್ಟಣದ ಎಲ್ಲಾ ಅನಧಿಕೃತ ಅಂಗಡಿ ಮುಗಟ್ಟುಗಳನ್ನ ತೆರವು ಮಾಡಬೇಕು ಎಂದು ತೆರವು ಕಾರ್ಯಕ್ಕೆ ಮುಂದಾದ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.