ಯಾದಗಿರಿ: ಕೃಷ್ಣ ಹಾಗೂ ಭೀಮಾ ನದಿ ಪ್ರವಾಹದ ಸ್ಥಳಗಳಿಗೆ ಶುಕ್ರವಾರ ಭೇಟಿ ನೀಡಿದ್ದ, ಸಿಇಒ ಕವಿತಾ ಮನ್ನಿಕೇರಿ ಅವರು ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಗಳ ಜನರು ನದಿ ತೀರಕ್ಕೆ ಹೋಗದಂತೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದರು.
ಕೃಷ್ಣ, ಭೀಮಾ ನದಿ ನೀರಿನ ಮಟ್ಟ ಹೆಚ್ಚಳ: ಎಚ್ಚರಿಕೆ ವಹಿಸುವಂತೆ ಜನರಿಗೆ ಸಿಇಒ ಸೂಚನೆ
ಕೃಷ್ಣ, ಭೀಮಾ ನದಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ನದಿ ಪಾತ್ರದ ತಾಲೂಕು, ಗ್ರಾಮಗಳಿಗೆ ಭೇಟಿ ನೀಡಿ, ಪರಿಶೀಲಿಸಿದ ಸಿಇಒ ಕವಿತಾ ಮನ್ನಿಕೇರಿ ಅವರು ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಶಿವನೂರು ಗ್ರಾಮದಲ್ಲಿ ಪ್ರವಾಹ ವೀಕ್ಷಿಸಿ, ಮುಂಜಾಗೃತಿ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ರು.
ಇಲ್ಲಿನ ವಡಗೇರಾ ತಾಲೂಕಿನ ಶಿವನೂರು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಹಿಳೆವೋರ್ವಳು ಬಟ್ಟೆ ತೊಳೆಯಲು ನದಿ ತೀರದಲ್ಲಿ ಕುಳಿತಿದ್ದನ್ನು ನೋಡಿದರು. ಎಚ್ಚರಿಕೆ ವಹಿಸುವಂತೆ ಗ್ರಾಮದ ಮುಖಂಡರಿಗೆ ತಿಳಿಸಿದರು. ಆ ಮಹಿಳೆಗೂ ನದಿ ತೀರಕ್ಕೆ ಬರದಂತೆ ಹೇಳಿದರು. ಆದರೆ, ಗಂಗಮ್ಮ ನಮ್ಮನ್ನ ಕಾಯುತ್ತಾಳೆ ಎಂದು ಅಧಿಕಾರಿಗಳ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳದೆ ಮಹಿಳೆ ಅಲ್ಲಿಂದ ತೆರಳಿದಳು.
ಕೃಷ್ಣ ನದಿಯಿಂದ ಹೆಚ್ಚಿನ ಪ್ರಮಾಣದ ನೀರು ಬಿಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನೀವು ಬಟ್ಟೆ ತೊಳೆಯಲು ಬರಬಾರದು ಜಿಲ್ಲಾ ಪಂಚಾಯತ್ ಇಲಾಖೆ ಅಧಿಕಾರಿಗಳು ಮಹಿಳೆಗೆ ತಿಳಿ ಹೇಳಿದರು. ಕೃಷ್ಣ ಹಾಗೂ ಭೀಮಾ ನದಿ ಪ್ರವಾಹದಿಂದ ಅಪಾಯವಾಗುವುದಿಲ್ಲ, ನೀವು ತಲೆಕೆಡಿಸಿಕೊಳ್ಳಬೇಡಿ. ನಮ್ಮನ್ನು ಬೇರೆಡೆ ಕಳಿಸುವ ಬಗ್ಗೆ ವಿಚಾರ ಮಾಡಿ ಅನ್ನುತ್ತ ಮಹಿಳೆ ಮನೆ ದಾರಿ ಹಿಡಿದಳು.