ಯಾದಗಿರಿ:ದೆಹಲಿಯ ಏಮ್ಸ್ ನಿರ್ದೇಶಕರಾಗಿಯಾದಗಿರಿ ಮೂಲದ ಡಾ.ಎಂ.ಶ್ರೀನಿವಾಸ್ ನೇಮಕವಾಗಿದ್ದಾರೆ. ಶ್ರೀನಿವಾಸ್ ಅವರು ಮುಂದಿನ ಐದು ವರ್ಷದ ಅವಧಿಗೆ ಏಮ್ಸ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೇಮಕಾತಿ ಕಮಿಟಿಯ ಸೂಚನೆ ಮೇರೆಗೆ ಸಿಬ್ಬಂದಿ ಮತ್ತು ತರಬೇತಿ ವಿಭಾಗ ಆದೇಶ ಹೊರಡಿಸಿದೆ.
ದೆಹಲಿಯ ಏಮ್ಸ್ ನಿರ್ದೇಶಕ ಹುದ್ದೆಗೆ ಕನ್ನಡಿಗ ನೇಮಕ: ಯಾದಗಿರಿಯ ನಿವಾಸಿಯಾಗಿದ್ದ ದಿವಂಗತ ಆಶಪ್ಪ ಅವರ ಹಿರಿಯ ಪುತ್ರರಾಗಿರುವ ಡಾ. ಎಂ. ಶ್ರೀನಿವಾಸ್ ಅವರು ದೇಶದ ಪ್ರತಿಷ್ಠಿತ ಏಮ್ಸ್ ನಿರ್ದೇಶಕರಾಗಿ ನೇಮಕವಾಗಿರುವುದು ಯಾದಗಿರಿ ವೈದ್ಯ ಸಮೂಹ ಮತ್ತು ಜನರಿಗೆ ಸಂತಸ ಹಾಗೂ ಹೆಮ್ಮೆ ಮೂಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕಮೀಟಿಯು ಸೆ.9 ರಂದು ಈ ಆದೇಶ ಹೊರಡಿಸಿದೆ. ಇದಕ್ಕೂ ಮುಂಚೆ ಇದ್ದ ಡಾ. ರಣದೀಪ್ ಗುಲೇರಿಯಾ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ, ಮುಂದಿನ 5 ವರ್ಷದವರೆಗೆ ಅಥವಾ 65 ವರ್ಷ ವಯೋಮಿತಿ ವರೆಗೆ ಇದನ್ನು ಮುಂದುವರೆಸಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಈ ಹಿಂದೆ ನಿರ್ದೇಶಕರಾಗಿದ್ದ ಡಾ. ರಣದೀಪ್ ಗುಲೇರಿಯಾ (Dr Randeep Guleria) ಅವರನ್ನು 2017 ಮಾರ್ಚ್ 28ರಂದು ಏಮ್ಸ್ ನಿರ್ದೇಶಕರಾಗಿ ಐದು ವರ್ಷಗಳ ಅವಧಿಗೆ ನೇಮಕ ಮಾಡಲಾಗಿತ್ತು. ಅಧಿಕಾರ ಅವಧಿ ಮುಗಿದ ನಂತರ ಎರಡು ಬಾರಿ ತಲಾ ಮೂರು ತಿಂಗಳಂತೆ ಅವಧಿ ವಿಸ್ತರಿಸಲಾಗಿತ್ತು. ಇವರ ಅಧಿಕಾರಿ ಶುಕ್ರವಾರ ಅಂತ್ಯವಾಗಲಿದ್ದು, ಡಾ.ಶ್ರೀನಿವಾಸ್ ಮುಂದಿನ ಐದು ವರ್ಷ ಕಾರ್ಯನಿರ್ವಹಿಸಲಿದ್ದಾರೆ.