ಕರ್ನಾಟಕ

karnataka

ETV Bharat / state

ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್​ ಬಳಕೆ.. ಯಾದಗಿರಿಯಲ್ಲಿಯೂ ಮೂವರು ಪೊಲೀಸ್ ವಶಕ್ಕೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಇಂದಿನ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ಬ್ಲೂಟೂತ್​ ಬಳಕೆ ಮಾಡಿರುವ ಘಟನೆ ಯಾದಗಿರಿಯಲ್ಲಿಯೂ ನಡೆದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

By ETV Bharat Karnataka Team

Published : Oct 28, 2023, 6:52 PM IST

Updated : Oct 28, 2023, 7:23 PM IST

ಯಾದಗಿರಿ: ಕಲಬುರಗಿಯಲ್ಲಿ ಬ್ಲೂಟೂತ್ ಬಳಕೆ ಮಾಡಿದಂತೆ ಯಾದಗಿರಿಯಲ್ಲಿಯೂ ಕೆಲವು ಅಭ್ಯರ್ಥಿಗಳು ಬ್ಲೂಟೂತ್ ಬಳಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿರುವ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ಬ್ಲೂಟೂತ್​ ಬಳಕೆ ಮಾಡಿದ್ದು, ನಗರ ಪೊಲೀಸರು ಪುಟ್ಟಪ್ಪ ಎಂಬ ಅಭ್ಯರ್ಥಿ ಸೇರಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪುಟ್ಟಪ್ಪ ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನಾ ಗ್ರಾಮದವನು. ಈತ ಸೇರಿದಂತೆ ಪರೀಕ್ಷಾ ಕೇಂದ್ರದ ಹೊರಗಿದ್ದು, ಮಾಹಿತಿ ನೀಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಲ್ಲರೂ ಕಲಬುರಗಿ ಮೂಲದವರೆಂದು ತಿಳಿದು ಬಂದಿದೆ. ಈವರೆಗೆ 6 ರಿಂದ 8 ಮಂದಿಯನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ.

ಅಕ್ರಮದ ಕುರಿತು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿರುವ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ ಅವರು, ''ಖಾಲಿ ಹುದ್ದೆಗಳ ಭರ್ತಿಗಾಗಿ ಇಂದು ಮತ್ತು ನಾಳೆ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಆದರೆ, ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ ಮಾಡಿರುವ ಬಗ್ಗೆ ಜಿಲ್ಲಾ ಎಸ್‌ಪಿ ಅವರಿಗೆ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಮಾಹಿತಿ ಕಲೆ ಹಾಕಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದವನು ನಕಲಿ ಅಭ್ಯರ್ಥಿ ಎಂದು ದೃಢವಾಗಿದೆ. ಜಿಲ್ಲೆಯ ಸುರಪುರ, ಶಹಾಪುರ ಸೇರಿದಂತೆ 17 ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು 7884 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಕಟ್ಟುನಿಟ್ಟಿನ ಕ್ರಮ ಇದ್ದರೂ ಬ್ಲೂಟೂತ್ ಬಳಕೆಯಾಗಿದೆ. ಆರೋಪಿ ಅಫಜಲಪುರ ಮೂಲದವನು ಎಂದು ತಿಳಿದು ಬಂದಿದೆ. ಆತನನ್ನು ವಶಕ್ಕೆ ಪಡೆದು ಬ್ಲೂಟೂತ್ ಡಿವೈಸ್, ಮೊಬೈಲ್ ಜಪ್ತಿ ಮಾಡಲಾಗಿದೆ. ಈವರೆಗೆ ಒಟ್ಟು ಮೂವರನ್ನು ವಶಕ್ಕೆ ಪಡೆದು ವಿಚಾರಣೆಯನ್ನು ಮಾಡಲಾಗುತ್ತಿದೆ. ವಿಚಾರಣೆ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ'' ಎಂದರು.

ಇದನ್ನೂ ಓದಿ:ಕಲಬುರಗಿಯಲ್ಲಿ ಬ್ಲೂಟೂತ್​ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳು.. ಓರ್ವನ ಬಂಧನ, ಆರು ಮಂದಿ ವಶಕ್ಕೆ

ಕಲಬುರಗಿಯಲ್ಲಿ ಬ್ಲೂಟೂತ್ ಬಳಸಿ ಅಕ್ರಮವಾಗಿ ಪರೀಕ್ಷೆ ಬರೆಯುತ್ತಿದ್ದ ಓರ್ವ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದು, ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ನಗರದ ಶ್ರೀ ಶರಣಬಸವೇಶ್ವರ ವಿವಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಅದೇ ಸೊನ್ನ ಗ್ರಾಮದ ಅಭ್ಯರ್ಥಿ ತ್ರಿಮೂರ್ತಿ ಎಂಬಾತನನ್ನು ಪೊಲೀಸರು ರೆಡ್ ಹ್ಯಾಂಡ್​ ಆಗಿ ಹಿಡಿದಿದ್ದಾರೆ.

ಇಂದು ಕನ್ನಡ-ಇಂಗ್ಲಿಷ್ ಕಮ್ಯುನಿಕೇಷನ್ ಪರೀಕ್ಷೆ ಇತ್ತು. ಈತ ಬ್ಲೂಟೂತ್ ಸಹಾಯದಿಂದ ಹೊರಗಿನವರಿಂದ ಕೀ ಉತ್ತರ ಪಡೆದು ಅಕ್ರಮ ಎಸಗುತ್ತಿದ್ದ. ಬಂಧನದ ಬಳಿಕ ಆರೋಪಿ ತ್ರಿಮೂರ್ತಿಯನ್ನು ಇಎನ್​ಟಿ ವೈದ್ಯರ ಬಳಿ ಕರೆದೊಯ್ದು ತಪಾಸಣೆ ಕೂಡಾ ನಡೆಸಲಾಗಿದೆ. ಇನ್ನೋರ್ವ ಅಭ್ಯರ್ಥಿ ಅಭಿಷೇಕ್​ ಎಂಬಾತನ ವಿಚಾರಣೆ ಕೂಡ ನಡೆದಿದೆ.

ಮತ್ತೊಂದೆಡೆ ಅಫಜಲಪುರದ ಕೇಂದ್ರವೊಂದರಲ್ಲಿ ಇಬ್ಬರು ಅಭ್ಯರ್ಥಿಗಳು ಸೇರಿ ಐವರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. ಪರೀಕ್ಷಾ ಕೇಂದ್ರದ ಹತ್ತಿರ ಕಾರಿನಲ್ಲಿ ಕುಳಿತು ಬ್ಲೂಟೂತ್ ಮುಖಾಂತರ ಅಭ್ಯರ್ಥಿಗಳಿಗೆ ಕೀ ಉತ್ತರ ರವಾನಿಸುತ್ತಿರುವುದನ್ನು ಗಮನಿಸಿದ ಪೊಲೀಸರು, ಉತ್ತರ ಹೇಳಿ ಕೊಡುತ್ತಿದ್ದ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಮಾತ್ರವಲ್ಲದೆ ಅವರು ಕೊಟ್ಟ ಮಾಹಿತಿ ಅನ್ವಯ ಪರೀಕ್ಷೆ ಬರೆಯುತ್ತಿದ್ದ ಇನ್ನೂ ಇಬ್ಬರು ಅಭ್ಯರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಕಲಬುರಗಿ ಹಾಗೂ ಅಫಜಲಪುರನಲ್ಲಿ ಸಿಕ್ಕಿಬಿದ್ದ ಬಹುತೇಕರು ಅಫಜಲಪುರ ತಾಲೂಕಿನ ಸೊನ್ನ ಗ್ರಾಮದವರು ಎನ್ನಲಾಗುತ್ತಿದೆ. ಪಿಎಸ್ಐ ಪರೀಕ್ಷೆ ಹಗರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ಕೂಡಾ ಇದೇ ಗ್ರಾಮದವರಾಗಿದ್ದಾರೆ. ಅಕ್ರಮದ ಹಿಂದೆ ದೊಡ್ಡ ಜಾಲದ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: KPSC recruitment: ಗ್ರೂಪ್ ಸಿ ಹುದ್ದೆಗಳಿಗೆ ನವೆಂಬರ್ 4, 5 ರಂದು ಪರೀಕ್ಷೆ: ಕೆಪಿಎಸ್​​ಸಿ

Last Updated : Oct 28, 2023, 7:23 PM IST

ABOUT THE AUTHOR

...view details