ಗುರುಮಠಕಲ್(ಯಾದಗಿರಿ): ಪ್ರತಿ ಸರ್ಕಾರಿ ನೌಕರನು ಗೌರವ ಮತ್ತು ಸ್ವಾವಲಂಬಿಯುತವಾಗಿ ಜೀವನ ನಡೆಸುವುದಕ್ಕೆ ಸರ್ಕಾರದಿಂದ ಎಲ್ಲ ಸೌಲಭ್ಯಗಳು ಸಿಗಬೇಕು. ನೌಕರರ ಹಿತ ಕಾಪಾಡುವುದು ಸಂಘದ ಉದ್ದೇಶವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.
ಪಟ್ಟಣದಲ್ಲಿ ಗುರಮಠಕಲ್ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಲಾದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ಮತ್ತು ಶೈಕ್ಷಣಿಕ ತಂತ್ರಜ್ಞಾನ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸರ್ಕಾರದ 87 ಇಲಾಖೆಗಳಲ್ಲಿ ಇರುವ ಹಲವಾರು ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಮತ್ತು ಅಂಕಿ-ಅಂಶಗಳ ಸಮೇತ ಸರ್ಕಾರದೊಂದಿಗೆ ಚರ್ಚೆ ನಡೆಸಿ ಪರಿಹರಿಸಲಾಗುವುದು ಎಂದರು.
ಸರ್ಕಾರಿ ನೌಕರರ ಕರ್ತವ್ಯ ನಿಷ್ಠೆಯಿಂದ ಉತ್ತಮ ಆಡಳಿತಕ್ಕಾಗಿ ದೇಶದಲ್ಲಿಯೇ ಕರ್ನಾಟಕ ಸರ್ಕಾರವು 4ನೇ ಸ್ಥಾನದಲ್ಲಿದೆ. ಸರ್ಕಾರಿ ನೌಕರರೇ ಈ ಕೀರ್ತಿಗೆ ಕಾರಣ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತ ಅವಧಿಯಲ್ಲಿ ನೌಕರರ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ನೌಕರರ ಸಮಸ್ಯೆಗಳಿಗೆ ಯಡಿಯೂರಪ್ಪ ಅವರ ಸಹಕಾರ ಮರೆಯುವಂತಿಲ್ಲ ಎಂದರು.