ಯಾದಗಿರಿ :ಜಿಲ್ಲೆಯ ಸುರಪುರ ತಾಲೂಕಿನ ಬೋನ್ಹಾಳ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಅನೇಕ ಕಡೆ ಬಿರುಕು ಬಿಟ್ಟಿದ್ದು, ಯಾವಾಗಲಾದರೂ ಕುಸಿದು ಬೀಳಬಹುದೆಂಬ ಭಯ ಶಿಕ್ಷಕರು, ಮಕ್ಕಳಲ್ಲಿ ನಿರ್ಮಾಣವಾಗಿದೆ.
ಶಿಥಿಲಾವಸ್ಥೆ ತಲುಪಿರುವ ಶಾಲಾ ಕಟ್ಟಡ ಕೊರೊನಾ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಶಾಲೆಗಳು ಬಂದ್ ಆಗಿದ್ದವು. ಆದರೆ, ಇದೀಗ ಶಾಲೆಗಳು ಪುನಾರಂಭಗೊಂಡಿದ್ದು, ದುಸ್ಥಿತಿಯಲ್ಲಿರುವ ಕಟ್ಟಡದಲ್ಲಿಯೇ ತರಗತಿಗಳು ನಡೆಯುತ್ತವೆ. ಮಳೆ ಬಂದರೆ ಸಾಕು ಮೇಲ್ಛಾವಣಿಯಿಂದ ನೀರು ಸೋರುತ್ತಿದ್ದು, ಯಾವುದೇ ಸಂದರ್ಭದಲ್ಲಿ ಗೋಡೆಗಳು ಕುಸಿದು ಬೀಳುವ ಸಾಧ್ಯತೆ ಇದೆ.
ದುಸ್ಥಿತಿಯಲ್ಲಿರುವ ಶಾಲಾ ಕಟ್ಟಡ :2009ರಲ್ಲಿ ಶಾಲೆ ಕಟ್ಟಡದ ಪಕ್ಕದಲ್ಲಿ ಹೊಸದಾಗಿ ಮತ್ತೊಂದು ಕಟ್ಟಡವನ್ನು ಕಟ್ಟಲಾಗಿದೆ. ಅದರ ಕಾರ್ಯ ಅಪೂರ್ಣಗೊಂಡಿದೆ. ಈವರೆಗೂ ಆ ಕಟ್ಟಡದ ಸಮೀಪ ಯಾರೂ ಸುಳಿದಿಲ್ಲ. ಇತ್ತ ಪ್ರಾಥಮಿಕ ಶಾಲಾ ಕಟ್ಟಡ ತುಂಬಾ ಹಳೆಯದಾಗಿದೆ.
ಮಕ್ಕಳಿಗೆ ಕುಳಿತು ಪಾಠ ಕೇಳಲು ಆಗದಂತಹ ಸ್ಥಿತಿಯಲ್ಲಿದೆ. ಸುಮ್ಮನೆ ಹಣ ವ್ಯಯ ಮಾಡಲು ಮತ್ತೊಂದು ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರ ಹಿಂದೇಟು :ಶಾಲಾ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿರುವ ಹಿನ್ನೆಲೆ ಯಾವಾಗಲಾದರೂ ಕುಸಿದು ಬೀಳು ಸಾಧ್ಯತೆ ಇದೆ. ಇಂತಹ ದುಸ್ಥಿತಿಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಇತ್ತ ಶಾಲಾ ಶಿಕ್ಷಕರು ಕೂಡ ಭಯದಲ್ಲೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಗ್ರಾಮದಲ್ಲಿ ಎರಡು ಕಟ್ಟಗಳಿವೆ. ಆದರೆ, ಹೊಸ ಕಟ್ಟಡ ಪೂರ್ಣಗೊಂಡಿಲ್ಲ. ಶಾಲೆಯ ಮಕ್ಕಳಿಗೆ ಕುಳಿತು ಪಾಠ ಕೇಳಲು ಆಗದಂತಹ ಸ್ಥಿತಿಯನ್ನು ತಲುಪಿದೆ. ಮಕ್ಕಳು ಪಾಠ ಕೇಳಲು ಒಳ್ಳೆಯ ಪರಿಸರ ಬೇಕು. ಆದರೆ, ಇಲ್ಲಿನ ಮಕ್ಕಳು ಮಾತ್ರ ಯಾವಾಗ ಕಟ್ಟಡ ಬೀಳತ್ತೋ ಎಂಬ ಭಯದಲ್ಲಿ ಪಾಠ ಕೇಳುವಂತಾಗಿದೆ. ಹೀಗಾಗಿ, ಅನೇಕ ಮಕ್ಕಳು ಖಾಸಗಿ ಶಾಲೆಯತ್ತ ಮುಖ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಅನೇಕ ಬಾರಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಪುಟ್ಟ ಕಂದಮ್ಮಗಳ ಜೀವಗಳಿಗೆ ಯಾವುದೇ ಅಪಾಯ ಬಾರದಂತೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸಬೇಕಿದೆ.
ಇದನ್ನೂ ಓದಿ: ದೇಶದ ಕೀರ್ತಿ ಹೆಚ್ಚಿಸಿದ ಹಾಸನದ 'ಪ್ರೀತಿ'.. ವಿಶ್ವ ಶಾಂತಿ ಸೇನಾ ತುಕಡಿಗೆ ರಾಜ್ಯದ ವೀರ ವನಿತೆ..