ಯಾದಗಿರಿ:ಯಾದಗಿರಿ ಮತಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ನನ್ನ ಜಮೀನು ಮಾರಿಯಾದರೂ ಒಂದು ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಹೇಳಿದ್ದ ಬಿಜೆಪಿ ಮುಖಂಡರೊಬ್ಬರು ಕೊಟ್ಟ ಮಾತಿನಂತೆ 7 ಎಕರೆ ಜಮೀನು ಮಾರಿ ಸಿದ್ದರಾಮಯ್ಯ ಹೆಸರಿನಲ್ಲಿ ಚೆಕ್ ಬರೆದಿರುವುದಾಗಿ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಚಂದ್ರಾಯ ನಾಗರಾಳ ಅವರು ಹೇಳಿಕೆ ನೀಡಿದ್ದು, ರಾಜ್ಯ ರಾಜಕೀಯದಲ್ಲಿ ಕುತೂಹಲ ಉಂಟುಮಾಡಿದೆ. ಈಗಾಗಲೇ 20 ಲಕ್ಷ ರುಪಾಯಿ ಮೌಲ್ಯದ 5 ಚೆಕ್ ಬರೆದಿಟ್ಟಿರುವುದಾಗಿ ಅವರು ತಿಳಿಸಿದ್ದಾರೆ.
ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಹಾಪುರ, ಸುರಪುರ ನಗರಕ್ಕೆ ಆಗಮಿಸುತ್ತಿರುವ ಸಿದ್ದರಾಮಯ್ಯನವರ ಮುಂದೆ ಚೆಕ್‌ಗಳನ್ನು ಇಡುವುದಾಗಿ ತಿಳಿಸಿದ ಅವರು, ಕಾರ್ಯಕ್ರಮದಲ್ಲಿ ಭೇಟಿಯಾಗಲು ಸಾಧ್ಯವಾಗದಿದ್ದರೆ, ಬೆಂಗಳೂರಿಗೆ ತೆರಳಿ ಅವರನ್ನು ಭೇಟಿ ಮಾಡಿ ವಿನಂತಿ ಮಾಡುವುದಾಗಿ ಹೇಳಿದರು. ಯಾದಗಿರಿ ಜಿಲ್ಲಾಭಿವೃದ್ಧಿಗಾಗಿ ಸಿದ್ದರಾಮಯ್ಯ ಯಾದಗಿರಿ ಕ್ಷೇತ್ರದಿಂದ ಸ್ಪರ್ಧಿಸುವ ಅಗತ್ಯವಿದೆ. ಚೆಕ್‌ಗಳನ್ನು ಅವರು ಪಡೆದುಕೊಂಡು ಇಲ್ಲಿಂದ (ಯಾದಗಿರಿ) ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ, ತಮ್ಮ ಖರ್ಚು ವೆಚ್ಚಗಳಿಗೆ ಚುನಾವಣಾ ಆಯೋಗದ ಮಾನದಂಡದಂತೆ ಬಳಸಿಕೊಳ್ಳುವಂತೆ ಮನವಿ ಮಾಡಿದರು. ಸಿದ್ದರಾಮಯ್ಯ ಸ್ಪರ್ಧಿಸದೇ ಇದ್ದರೆ ಪಕ್ಕದ ಶಹಾಪುರ ಮತಕ್ಷೇತ್ರದ ಶಾಸಕ ಶರಣಬಸಪ್ಪಗೌಡ ದರ್ಶನಾಪೂರ ಅವರನ್ನಾದರೂ ಇಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ರಾಯಚೂರು ಅಥವಾ ಸಿಂಧನೂರಿನಿಂದ ಸ್ಪರ್ಧಿಸಿದರೆ ತಮ್ಮ ಪಾಲಿನ ಎರಡು ಎಕರೆ ಹೊಲ ಮಾರಿ ಚುನಾವಣೆಯ ಖರ್ಚಿಗೆ ನೀಡುವುದಾಗಿ ಇತ್ತೀಚೆಗೆ ಗ್ರಾ.ಪಂ.ಸದಸ್ಯ ಹಾಗು ಸಿದ್ದರಾಮಯ್ಯ ಅವರ ಅಭಿಮಾನಿ ಶರಣು ಕಡ್ಡೋಣಿ ಎನ್ನುವವರು ವಿಶೇಷ ಬೇಡಿಕೆ ಇಟ್ಟಿದ್ದರು. ಸಿದ್ದರಾಮಯ್ಯ ರಾಯಚೂರು, ಸಿಂಧನೂರು ಎರಡು ಕ್ಷೇತ್ರಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಸ್ಪರ್ಧಿಸಿದರೆ ತಮ್ಮ ಪಾಲಿನ ಜಮೀನು ಮಾರಿ ಬಂದ ಹಣವನ್ನು ಚುನಾವಣೆ ಕಾರ್ಯಕ್ಕೆ ಕೊಡುವುದಾಗಿ ಹೇಳಿದ್ದರು.