ಯಾದಗಿರಿ: ಬಿಜೆಪಿ ಸರ್ಕಾರವು ಜಾಹೀರಾತುಗಳಲ್ಲಿ ರಾಜ್ಯದ ಅಭಿವೃದ್ಧಿ ಕುರಿತು ಬಿಂಬಿಸುತ್ತಿದೆ. ಜಾಹೀರಾತುಗಳಿಗೆ ನೀಡುವ ಆದ್ಯತೆ ಜನತೆ ಮೇಲೆ ಹಾಗೂ ರಾಜ್ಯದ ಅಭಿವೃದ್ಧಿ ಕಡೆಗೆ ಗಮನಹರಿಸಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದರು.
ಜಿಲ್ಲೆಯ ಗುರುಮಠಕಲ್ ಪಟ್ಟಣದ ಶಾಸಕ ನಾಗನಗೌಡ ಕಂದಕೂರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಬ್ಬ ಇಲಾಖೆ ಅಧಿಕಾರಿ ಮತ್ತು ಶಾಸಕರು ಮಾಡಬೇಕಾಗಿದ್ದ ಕಾಮಗಾರಿಗಳ ಶಂಕು ಸ್ಥಾಪನೆಯನ್ನು ರಾಜ್ಯದ ಚುನಾವಣೆ ಹಿನ್ನೆಲೆ ಅಮಿತ್ ಶಾ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಉದ್ಘಾಟಿಸುತ್ತಿರುವುದು ಚುನಾವಣೆ ಪ್ರಚಾರದ ಹೊಸ ದಾರಿಗೆ ನಾಂದಿ ಹಾಡಿದಂತಿದೆ ಎಂದು ಕಿಡಿಕಾರಿದರು.
ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಎಂದು ಜಂಭ ಕೊಚ್ಚಿಕೊಳ್ಳುತ್ತಿದೆ. ಆದರೆ ಅಭಿವೃದ್ಧಿ ಕಡೆಗಣಿಸಿರುವ ಸ್ಥಳೀಯ ನಾಯಕರ ಮೇಲೆ ಭರವಸೆ ಇಲ್ಲದ ಕಾರಣ ಪ್ರತಿಯೊಂದು ಕಾಮಗಾರಿ ಅಪೂರ್ಣವಾಗಿದ್ದರೂ, ಉದ್ಘಾಟನೆಗೆ ಕೇಂದ್ರದಿಂದ ಸಚಿವರು ಮತ್ತು ಪ್ರಧಾನಿಗಳು ಬರುತ್ತಿರುವುದು ಬಿಜೆಪಿ ಹತಾಶೆಗೆ ಒಳಗಾಗಿದೆ ಎಂದು ಲೇವಡಿ ಮಾಡಿದರು.
ಖರ್ಗೆ ಸೋಲಿಸುತ್ತೇನೆಂದ ಚಿಂಚನಸೂರ್ಗೆ ಕೆಂಪುಹಾಸಿಗೆ: ಬಾಬುರಾವ್ ಚಿಂಚನಸೂರ್ ತೊಡೆ ತಟ್ಟಿ ಖರ್ಗೆ ಅವರನ್ನು ಸೋಲಿಸುತ್ತೇನೆ ಎನ್ನುತ್ತಿದ್ದವರಿಗೆ ಕೆಂಪುಹಾಸಿಗೆ ಹಾಕಿರುವುದು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಕೊರತೆ ಇರುವುದು ಎದ್ದು ಕಾಣುತ್ತಿದೆ. ನಮ್ಮ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ದಾಖಲಿಸುತ್ತಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.