ಯಾದಗಿರಿ: ಜಿಲ್ಲಾ ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಭೀಮಣ್ಣ ಮೇಟಿಯ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವವನ್ನು ರದ್ದು ಪಡಿಸಿದ ಹಿನ್ನೆಲೆ ಶಹಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶರಣಬಸಪ್ಪ ದರ್ಶನಾಪುರ ಜತೆ ಭೀಮಣ್ಞ ಮೇಟಿ ಬೆಂಬಲಿಗರು ಮಾತಿನ ಚಕಮಕಿ ನಡೆಸಿದ್ದಾರೆ.
ನಿನ್ನೆ ತಾನೆ ಹಾಲು ಮತ ಸಮಾಜದ ಮುಖಂಡ ಭೀಮಣ್ಣ ಮೇಟಿ ಬಿಜೆಪಿ ಪಕ್ಷವನ್ನು ತೊರೆದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಯಾದಗಿರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರೀಗೌಡ ಹುಲಕಲ್, ವಿಧಾನಸಭಾ ಕ್ಷೇತ್ರಗಳ ಮಾಜಿ ಶಾಸಕರು, ಶಹಾಪೂರ ವಿಧಾನಸಭಾ ಕ್ಷೇತ್ರದ ಶಾಸಕ ಶರಣಬಸಪ್ಪ ದರ್ಶನಾಪುರ ಹಾಗೂ ಪಕ್ಷದ ಮುಖಂಡರು ಚರ್ಚಿಸಿ, ವಿರೋಧಿಸಿ ಒಮ್ಮತದಿಂದ ಮೇಟಿಯವರ ಪ್ರಾಥಮಿಕ ಸದಸ್ಯತ್ವವನ್ನು ರದ್ದುಪಡಿಸಿದ್ದರು.
ಶಾಸಕ ಶರಣಬಸಪ್ಪ ಜೊತೆ ಭೀಮಣ್ಣ ಮೇಟಿಯ ಬೆಂಬಲಿಗರ ಮಾತಿನ ಚಕಮಕಿ ಸ್ಥಳೀಯ ಜಿಲ್ಲಾ ಮುಖಂಡರಿಗೆ ಸೇರ್ಪಡೆ ವಿಚಾರ ತಿಳಿಸದೆ ನೇರವಾಗಿ ಬೆಂಗಳೂರಿನ ಕೆಪಿಸಿಸಿ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿರುವುದನ್ನು ವಿರೋಧ ವ್ಯಕ್ತಪಡಿಸಿ, ಸದಸ್ಯತ್ವವನ್ನು ರದ್ದು ಪಡಿಸುವಂತೆ ನೇರವಾಗಿ ದಿನೇಶ ಗುಂಡುರಾವ್ ಅವರಿಗೆ ಮಾಹಿತಿ ರವಾನಿಸಿದ್ದರು. ಈ ಹಿನ್ನೆಲೆ ಭೀಮಣ್ಣ ಮೇಟಿಯವರ ಪ್ರಾಥಮಿಕ ಸದಸ್ಯತ್ವ ರದ್ದಾಗಿತ್ತು. ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ವಿ ನಾಯಕ ಇಂದು ಶಹಾಪುರ ನಗರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಕ್ಕೆ ಆಗಮಿಸಿದ ಹಿನ್ನೆಲೆ ಶಾಸಕ ಶರಣಬಸಪ್ಪ ಹಾಗೂ ಭೀಮಣ್ಣ ಮೇಟಿಯವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು.
ಭೀಮಣ್ಣ ಮೇಟಿಯವರ ಪ್ರಾಥಮಿಕ ಸದಸ್ಯತ್ವ ರದ್ದಾಗುವುದಕ್ಕೆ ಮೂಲ ಕಾರಣಿಕರ್ತರು ನೀವೇ ಎಂದು ಶಾಸಕ ಶರಣಬಸಪ್ಪ ಮೇಲೆ ಮೇಟಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಶಾಸಕ ಶರಣಬಸಪ್ಪ ಪ್ರತಿಕ್ರಿಯೆ ನೀಡಿ, ಸ್ಥಳೀಯ ಜಿಲ್ಲಾ ಅಧ್ಯಕ್ಷರಿಗೆ, ಶಾಸಕರಿಗೆ, ಮುಖಂಡರಿಗೆ ತಿಳಿಸದೆ ನೇರವಾಗಿ ಬೆಂಗಳೂರಿನಲ್ಲಿ ಪಕ್ಷಕ್ಕೆ ಸೇರ್ಪಡೆಯಾದ್ರೆ ಪಕ್ಷದ ತತ್ವ ಸಿದ್ದಾಂತಗಳು ಒಪ್ಪುವುದಿಲ್ಲ. ನನಗೆ ಮಾಹಿತಿ ನೀಡಿದ್ದರೆ ನೇರವಾಗಿ ಶಹಾಪುರಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿತ್ತು ಎಂದು ಬೆಂಬಲಿಗರಿಗೆ ಸಮಜಾಯಿಸಿದರು.