ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ ವೇದಮೂರ್ತಿ ಯಾದಗಿರಿ :ಪಾರ್ಕಿಂಗ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಜಗಳ ಬಿಡಿಸಲು ಬಂದ ವ್ಯಕ್ತಿಯೋರ್ವರಿಗೆ ಚಾಕುವಿನಿಂದ ಇರಿದು ಕೊಲೈಗೈದಿರುವ ಘಟನೆ ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಬಳಿ ನಡೆದಿದೆ. ಭಾನುವಾರ ತಡರಾತ್ರಿ ಘಟನೆ ನಡೆದಿದ್ದು, ಶ್ರೀನಿವಾಸ್ (44) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಎಸ್. ಕೆ. ಎಮ್ ವಾಟರ್ ಸರ್ವೀಸ್ ಹತ್ತಿರ ಭವಾನಿ ವೈನ್ ಶಾಪ್ ಮಾಲೀಕ ಚಂದ್ರಶೇಖರ ಗುತ್ತೇದಾರ ತಮ್ಮ ಕಾರನ್ನು ನಿಲುಗಡೆ ಮಾಡಿದ್ದರು. ಅದರ ಪಕ್ಕದಲ್ಲೇ ರಾಯಲ್ ಗಾರ್ಡನ್ ಹೋಟೆಲ್ಗೆ ಆಗಮಿಸಿದ್ದ ಗ್ರಾಹಕರು ಬೈಕ್ ನಿಲ್ಲಿಸಿದ್ದರು ಎಂದು ಹೇಳಲಾಗಿದೆ. ಇದರಿಂದ ಚಂದ್ರಶೇಖರ ಗುತ್ತೇದಾರ್ ಅವರಿಗೆ ಕಾರು ತೆಗೆದುಕೊಂಡು ಹೋಗಲು ಸಾಧ್ಯವಾಗಿರಲಿಲ್ಲ. ಈ ಸಂಬಂಧ ಸಮೀಪದಲ್ಲಿದ್ದ ರಾಯಲ್ ಗಾರ್ಡನ್ ಹೋಟೆಲ್ ಮಾಲೀಕ ಅಬ್ದುಲ್ ಸತ್ತಾರ್ ಎಂಬವರ ಬಳಿ ಹೋಗಿ ಈ ಬಗ್ಗೆ ಪ್ರಶ್ನಿಸಿದ್ದಾರೆ. ಈ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ತಾರಕಕ್ಕೇರಿದೆ.
ಹೋಟೆಲ್ ಮಾಲೀಕ, ಕೆಲಸಗಾರರು ಹಾಗೂ ಚಂದ್ರಶೇಖರ್ ನಡುವೆ ಗಲಾಟೆ ನಡೆದಿದ್ದು, ಇವರ ತಳ್ಳಾಟದ ವೇಳೆ ಹೋಟೆಲ್ ನೌಕರನೋರ್ವ ಜಗಳ ಬಿಡಿಸಲು ಬಂದ ಶ್ರೀನಿವಾಸನ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಮಹಮ್ಮದ್ ಅನಾಸ್ ಅಬ್ದುಲ್ ಖಾನ್ ಕೊಲೆ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆಯಲ್ಲಿ ಚಂದ್ರಶೇಖರ್ ಅವರಿಗೆ ಗಾಯಗಳಾಗಿವೆ.
ಇದನ್ನೂ ಓದಿ :ಖಡಕ್ವಾಸ್ಲಾ ಡ್ಯಾಂಗೆ ಈಜಲು ಬಂದ ಬಾಲಕಿಯರು: 7 ಮಂದಿ ರಕ್ಷಣೆ, ಇಬ್ಬರ ಸಾವು
ಈ ಬಗ್ಗೆ ಪ್ರತಿಕ್ರಿಯಿಸಿದ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ. ಬಿ ವೇದಮೂರ್ತಿ, ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಬಳಿ ಇರುವ ರಾಯಲ್ ಗಾರ್ಡನ್ ಹೋಟೆಲ್ ಬಳಿ ಭಾನುವಾರ ರಾತ್ರಿ 10 ಗಂಟೆಗೆ ಈ ಘಟನೆ ನಡೆದಿದೆ. ರಾಯಲ್ ಗಾರ್ಡನ್ ಮತ್ತು ಭವಾನಿ ವೈನ್ ಶಾಪ್ ಮಾಲೀಕರ ನಡುವೆ ಗಲಾಟೆ ನಡೆದಿದೆ. ಈ ಭವಾನಿ ವೈನ್ ಶಾಪ್ ಮುಂದೆ ಮಾಲೀಕರು ತಮ್ಮ ಕಾರು ನಿಲ್ಲಿಸಿದ್ದರು. ಇವರ ಕಾರಿನ ಹಿಂದೆ ರಾಯಲ್ ಗಾರ್ಡನ್ ಹೋಟೆಲ್ಗೆ ಆಗಮಿಸಿದ ಗ್ರಾಹಕರು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದರು.
ಈ ವಾಹನವನ್ನು ತೆಗೆಯುವಂತೆ ಭವಾನಿ ವೈನ್ ಶಾಪ್ ಮಾಲೀಕ ಚಂದ್ರಶೇಖರ್ ಹಾಗೂ ರಾಯಲ್ ಗಾರ್ಡನ್ ಹೋಟೆಲ್ ಮಾಲೀಕ ಅಬ್ದುಲ್ ಸತ್ತಾರ್ ಬಳಿ ಹೇಳಿದ್ದಾರೆ. ಈ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಜಗಳ ಬಿಡಿಸಲು ಬಂದಿದ್ದ ಶ್ರೀನಿವಾಸ್ ಎಂಬವರಿಗೆ ಜಗಳದ ನಡುವೆ ಚೂರಿ ಇರಿದು ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಬಳಿಕ ಸ್ಥಳದಲ್ಲಿ ಮತ್ತು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲಾಗಿದೆ. ಘಟನೆ ಸಂಬಂಧ ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಇದನ್ನೂ ಓದಿ :ಹೊಸಕೋಟೆಯಲ್ಲಿ ನಿಲ್ಲದ ರಾಜಕೀಯ ವೈಷಮ್ಯ: ಕಿಡಿಗೇಡಿಗಳಿಂದ ಎಂಟಿಬಿ ವೃತ್ತದ ಬೋರ್ಡ್ ಧ್ವಂಸ