ಗುರುಮಠಕಲ್: ಜೀವನದ ಪ್ರತಿ ಪರೀಕ್ಷೆಯಲ್ಲಿ ಸತತ ಪ್ರಯತ್ನ ಮತ್ತು ಧನಾತ್ಮಕ ಚಿಂತನೆಗಳಿಂದ ಅತ್ಯುತ್ತಮ ಸಾಧನೆ ಮಾಡಬಹುದು ಎಂದು ಆರಕ್ಷಕ ಉಪ ನಿರೀಕ್ಷಕ ಹಣಮಂತ ಬಂಕಲಗಿ ಅಭಿಪ್ರಾಯ ಪಟ್ಟರು.
ಪಟ್ಟಣದ ತಾಲೂಕು ಗಂಗಾಮತ ಕೋಲಿ ಸಮಾಜದ ನೌಕರರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಜೀವನದ ಪ್ರತಿ ಹೆಜ್ಜೆಯಲ್ಲಿ ಸಾಧನೆಯು ನಿಂತ ನೀರಾಗಬಾರದು. ಅದು ಸತತ ಪ್ರಯತ್ನ ಮತ್ತು ಸೃಜನಾತ್ಮಕ ಆಲೋಚನೆ ಮತ್ತು ಕಟ್ಟುನಿಟ್ಟಾದ ಸಮಯ ಪಾಲನೆಯ ಮೂಲಕ ಯಶಸ್ಸನ್ನು ಗಳಿಸಬಹುದು. ಪರೀಕ್ಷೆಗಳಲ್ಲಿ ಪಡೆದ ಅಂಕಗಳು ಜೀವನದ ಉನ್ನತಿಗೆ ಪ್ರೇರಕವಾಗಿ ಸಮಾಜ ಅಭ್ಯುದಯಕ್ಕೆ ನಾಂದಿ ಹಾಡಬೇಕು. ಪ್ರತಿ ಸೋಲನ್ನು ಸವಾಲಾಗಿ ಸ್ವೀಕರಿಸಿ ಇತರರಿಗೆ ಮಾದರಿಯಾಗುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವೃತ್ತ ಆರಕ್ಷಕ ನಿರೀಕ್ಷಕ ದೇವಿಂದ್ರಪ್ಪ ಧೂಳಖೇಡ ಮಾತನಾಡಿ, ಗಡಿಭಾಗದ ಈ ಭಾಗದಲ್ಲಿ ಗಂಗಾಮತ ಸಮಾಜದ ವಿದ್ಯಾರ್ಥಿಗಳು ವಿಜ್ಞಾನ ಮತ್ತು ಗಣಿತ ವಿಭಾಗದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಪ್ರತಿಭೆಗಳ ಅನಾವರಣಗೊಂಡಿದ್ದು ಸಂತಸ ತಂದಿದೆ ಎಂದು ಹೇಳಿದರು.