ಯಾದಗಿರಿ: ಕೋವಿಡ್ ಲಸಿಕೆ ಹಾಕಲು ಬಂದ ಅಧಿಕಾರಿಗಳನ್ನು ಕಂಡು ಎತ್ತಿನ ಬಂಡಿಯಿಂದ ಇಳಿದು ಯುವಕನೊಬ್ಬ ಓಡಿ ಹೋದ ಘಟನೆ ಯಾದಗಿರಿ ತಾಲೂಕಿನ ಹೆಡಗಿಮುದ್ರಾ ಗ್ರಾಮದಲ್ಲಿ ನಡೆದಿದೆ.
ಯಾದಗಿರಿ: ಲಸಿಕೆ ಹಾಕಲು ಬಂದ ಅಧಿಕಾರಿಗಳನ್ನ ಕಂಡು ಎದ್ದು ಬಿದ್ದು ಗದ್ದೆಯಲ್ಲಿ ಓಡಿ ಹೋದ ಯುವಕ..! - ಕೋವಿಡ್ ಲಸಿಕೆ
ಎಷ್ಟೋ ಮಂದಿ ಕೊರೊನಾ ದಿಂದ ಪಾರಾಗಲು ಆಸ್ಪತ್ರೆಗಳಿಗೆ ಹೋಗಿ ಲಸಿಕೆ ಪಡೆಯುತ್ತಾರೆ. ಆದರೆ, ಯಾದಗಿರಿ ತಾಲೂಕಿನ ಹೆಡಗಿಮುದ್ರಾ ಗ್ರಾಮಕ್ಕೆ ಹೋಗಿ ಉಚಿತವಾಗಿ ಲಸಿಕೆ ನೀಡಿದರೂ ಕುಂಟು ನೆಪಗಳನ್ನು ಹೇಳಿ ಇಲ್ಲಿನ ಕೆಲವರು ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಇದೇ ಗ್ರಾಮದಲ್ಲಿ ಯುವಕನೊಬ್ಬ ಅಧಿಕಾರಿಗಳನ್ನು ಕಂಡು ಗದ್ದೆಯಲ್ಲಿ ನುಗ್ಗಿ ಓಡಿ ಹೋಗಿರುವ ಪ್ರಸಂಗವೂ ನಡೆದಿದೆ.
ಗ್ರಾಮಕ್ಕೆ ಆಶಾ, ಅಂಗನವಾಡಿ ಕಾರ್ಯಕರ್ತರು ಸೇರಿ ಅಧಿಕಾರಿಗಳು ಲಸಿಕೆ ನೀಡಲು ಬಂದಿದ್ದರು. ಆಗ ಅಧಿಕಾರಿಗಳನ್ನು ನೋಡಿ ಯುವಕ ಚಪ್ಪಲಿ ಕೈಯಲ್ಲಿ ಹಿಡಿದುಕೊಂಡು ಕೆಸರು ಗದ್ದೆಯಲ್ಲೇ ಓಡಿ ಹೋಗಿದ್ದಾನೆ. ಬೇರೆ ಮಾತ್ರೆ ತಗೊಂಡಿದ್ದೀನಿ. ನಾನು ಎಣ್ಣೆ ಹೊಡಿಯೋಕೆ ಹೋಗಬೇಕು, ನಾಳೆ ಬಂದು ವ್ಯಾಕ್ಸಿನ್ ತಗೊತೀನಿ ಅಂತ ನಾನಾ ಕುಂಟು ನೆಪಗಳನ್ನು ನೀಡಿ ಇಲ್ಲಿನ ಜನರು ವ್ಯಾಕ್ಸಿನ್ ತಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಜಿಲ್ಲಾಮಟ್ಟದ ಅಧಿಕಾರಿಗಳು ಖುದ್ದಾಗಿ ಮನೆ ಮನೆಗೆ ಹೋದರೂ ಜನ ಮಾತು ಕೇಳದೆ ಅಧಿಕಾರಿಗಳೊಂದಿಗೆ ವಾದ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ಪ್ರಮಾಣ ಕಡಿಮೆ ಆಗಿರುವುದು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ.