ಯಾದಗಿರಿ:ಕೃಷ್ಣಾ ನದಿ ಪ್ರವಾಹದ ತಪ್ಪಲು ನಡುಗಡ್ಡೆಯಲ್ಲಿ 230 ಕುರಿಗಳೊಂದಿಗೆ ಸಿಕ್ಕಿ ಹಾಕಿಕೊಂಡಿರುವ ಕುರಿಗಾಹಿ ರಕ್ಷಣೆಗೆ ಕೇಂದ್ರದ ಎನ್ಡಿಆರ್ ಎಫ್ನ 16 ಜನರ ತಂಡ ನದಿ ತೀರಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಗೆ ತಯಾರಿ ನಡೆಸಿದ್ದಾರೆ.
ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಐಬಿ ತಾಂಡದ ಬಳಿ ಇರುವ ನಡುಗಡ್ಡೆಯಲ್ಲಿ ಘಟನೆ ನಡೆದಿದೆ. ಕುರಿಗಾಹಿ ಟೋಪಣ್ಣ ಎಂಬವರು ಕುರಿಮೇಯಿಸಲು ನಡುಗಡ್ಡೆಗೆ ತೆರಳಿದ್ದರು. ಮೊದಲು 165 ಕುರಿಗಳಿವೆ ಎಂದು ಅಂದಾಜಿಸಲಾಗಿತ್ತು. ಆದರೆ ದ್ರೋಣ್ ಕ್ಯಾಮರಾ ಮೂಲಕ ಕುರಿಗಾಹಿ ಸ್ಥಳವನ್ನ ವೀಕ್ಷಣೆ ಮಾಡಿದಾಗ ಟೋಪಣ್ಣ ಬಳಿ ಸುಮಾರು 230 ಕುರಿಗಳು ನಡುಗಡ್ಡೆಯಲ್ಲಿ ಸಿಲುಕಿವೆ ಎಂದು ತಿಳಿದು ಬಂದಿದೆ.
ಎನ್ಡಿಆರ್ಎಫ್ನಿಂದ ರಕ್ಷಣಾ ಕಾರ್ಯ ಆರಂಭ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಯಾವ ಸ್ಥಳದಿಂದ ಕಾರ್ಯಾಚರಣೆ ನಡೆಸಿದರೆ, ಸೂಕ್ತ ಎಂಬುದರ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಜಲಾಶಯದಿಂದ ಕೃಷ್ಣಾ ನದಿಗೆ ನೀರಿನ ಹರಿವು 2.20 ಲಕ್ಷ ಕ್ಯೂಸೆಕ್ನಿಂದ 1.79 ಲಕ್ಷ ಕ್ಯೂಸೆಕ್ಗೆ ಇಳಿಕೆ ಮಾಡಲಾಗಿದ್ದು, ನೀರಿನ ಪ್ರಮಾಣ ಕಡಿಮೆಯಾದ ಹಿನ್ನೆಲೆ ಬೋಟ್ ಮೂಲಕ ಕುರಿಗಾಹಿ ರಕ್ಷಣೆ ಕಾರ್ಯ ಪ್ರಾರಂಭಿಸಲಾಗಿದೆ.
ಹೈದರಾಬಾದ್ನಿಂದ ಆಗಮಿಸಿದ 16 ಜನರ ಎನ್ಡಿಆರ್ಎಫ್ ತಂಡ ಎರಡು ಏರ್ ಬೋಟ್ಗಳನ್ನು ಸಿದ್ಧಪಡಿಸಿಕೊಳ್ಳುವ ಮೂಲಕ ಕಾರ್ಯಾಚರಣೆ ನಡೆಸುತ್ತಿದೆ. ಜೊತೆಗೆ ಅಗ್ನಿ ಶಾಮಕದಳದ ಒಂದು ಬೋಟ್ಅನ್ನು ಕೂಡ ನದಿ ದಡದಲ್ಲಿ ಇರಿಸಲಾಗಿದೆ. ಸ್ಥಳದಲ್ಲಿ ಸುರಪುರ ಶಾಸಕ ರಾಜುಗೌಡ ಹಾಗೂ ತಾಲೂಕಾಡಳಿತ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.