ಸುರಪುರ:ಹುಣಸಗಿ ತಾಲೂಕಿನ ಪರತನಾಯ್ಕ ತಾಂಡಾದಲ್ಲಿ ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಯೊಬ್ಬ ಶಾಲೆ ಬಾಗಿಲು ಮುರಿದು ಎಸ್ಕೇಪ್ ಆಗಿದ್ದು, ಹಿಡಿಯಲು ಹೋದ ಪೊಲೀಸ್ ಹಾಗೂ ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದಾನೆ.
ಕ್ವಾರಂಟೈನ್ ಕೇಂದ್ರದಿಂದ ಎಸ್ಕೇಪ್ ಆದ ಆಸಾಮಿ ಅಲ್ಲದೇ ಯುವಕನೋರ್ವನಿಗೆ ಕಚ್ಚಿ ಗಾಯಗೊಳಿಸಿದ್ದಾನೆ. ಹೀಗೆ ಕ್ವಾರಂಟೈನ್ ಕೇಂದ್ರದಿಂದ ತಪ್ಪಿಸಿಕೊಂಡವನನ್ನ ವೆಂಕಟೇಶ ರಾಠೋಡ ಎಂದು ಗುರುತಿಸಲಾಗಿದೆ. ಗುಳೆ ಹೋಗಿ ಮಹಾರಾಷ್ಟ್ರದಿಂದ ಆಗಮಿಸಿದ್ದ ವೆಂಕಟೇಶ್ ಮತ್ತವರ ಕುಟುಂಬವನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿತ್ತು. ಆದ್ರೆ ನಿನ್ನೆ ಶಾಲೆಯ ಬಾಗಿಲು ಮುರಿದು ತಾಂಡಾಕ್ಕೆ ನುಗ್ಗಿದ್ದ ವೇಳೆ ಗ್ರಾಮಸ್ಥರು ತಾಂಡದೊಳಗೆ ಬರದಂತೆ ತಡೆ ಹಿಡಿದ ವೇಳೆ ಗಲಾಟೆ ನಡೆದಿದೆ.
ಸುದ್ದಿ ತಿಳಿದು ವೆಂಕಟೇಶ ರಾಠೋಡನನ್ನು ಹಿಡಿಯಲು ಮುಂದಾದ ಎಎಸ್‌ಐ ಭೀಮಾಶಂಕರ್ ಮೇಲೆ ಕಲ್ಲು ತೂರಿ ಗಾಯಗೊಳಿಸಿದ್ದು, ಬುದ್ಧಿ ಹೇಳಿ ಕರೆ ತರಲು ಹೋದ ಸುನೀಲ್ ನಾಯ್ಕ ಎಂಬುವವನಿಗೂ ಕಚ್ಚಿ ಗಾಯಗೊಳಿಸಿದ್ದಾನೆ.
ವೆಂಕಟೇಶನ ಪರವಾಗಿಯೇ ನಿಂತ ಆತನ ಪತ್ನಿ ಮತ್ತು ಸಹೋದರರು ಕೂಡ ಪೊಲೀಸರ ಮೇಲೆಯೇ ಹರಿಹಾಯ್ದು ಉದ್ಧಟತನ ತೋರಿದ್ದಾರೆ. ಆತನನ್ನು ಹಿಡಿದು ತರಲು ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದು, ಗಾಯಗೊಂಡ ಎಎಸ್‌ಐ ಹಾಗೂ ಗ್ರಾಮಸ್ಥ ಸುನೀಲ್ ನಾಯ್ಕಗೆ ಕೊಡೇಕಲ್ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಗಲಾಟೆ ಮಾಡಿದ ವೆಂಕಟೇಶ್ ವಿರುದ್ಧ ಕೊಡೇಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜನರ ಸುರಕ್ಷತೆಗಾಗಿ ಕ್ವಾರಂಟೈನ್ ಕೇಂದ್ರ ನಿರ್ಮಿಸಿ ಎಲ್ಲಾ ವ್ಯವಸ್ಥೆ ಕಲ್ಪಿಸಿದರೂ ಹೀಗೆ ಉದ್ಧಟತನ ತೋರುವವರ ಮೇಲೆ ದಿಟ್ಟ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.