ಯಾದಗಿರಿ: ನಡು ರಸ್ತೆಯಲ್ಲಿ ಬೃಹದಾಕಾರದ ಮೊಸಳೆ ಪ್ರತ್ಯಕ್ಷವಾಗಿದ್ದನ್ನು ಕಂಡು ಜನ ಬೆಚ್ಚಿ ಬಿದ್ದಿರುವ ಘಟನೆ ವಡಗೇರಾ ತಾಲ್ಲೂಕಿನ ಹಾಲಗೇರಾ ಗ್ರಾಮದ ಸಮೀಪದ ರಸ್ತೆ ಬಳಿ ನಡೆದಿದೆ.
ಹಲಗೇರಾ ಗ್ರಾಮದ ಪಕ್ಕದ ಕೆರೆಯಿಂದ ಆಹಾರ ಹುಡುಕುತ್ತ ರಸ್ತೆಗೆ ಬಂದ ಬೃಹದಾಕಾರದ ಮೊಸಳೆಯನ್ನ ಕಂಡು ಜನ ಭಯಭೀತರಾದರು. ಇದನ್ನು ನೋಡಿದ ವಾಹನ ಸವಾರರು ಜೀವ ಭಯದಿಂದ ಸಂಚರಿಸಿದರು. ಈ ಹಿಂದೆಯೂ ಕೂಡ ಇದೇ ಗ್ರಾಮದ ರಸ್ತೆಯಲ್ಲಿ ಪ್ರತ್ಯಕ್ಷವಾದ ಮೊಸಳೆಯನ್ನು ಸೆರೆ ಹಿಡಿಯಲಾಗಿತ್ತು.
ನಡು ರಸ್ತೆಯಲ್ಲಿ ಪ್ರತ್ಯಕ್ಷವಾಯ್ತು ಬೃಹದಾಕಾರದ ಮೊಸಳೆ ಬೇಸಿಗೆ ಬಿರು ಬಿಸಿಲಿನ ತಾಪದಿಂದಾಗಿ ಮೊಸಳೆಗಳು ರಸ್ತೆಗೆ ಎಂಟ್ರಿ ಕೊಡುತ್ತಿರುವದರಿಂದ ಹಲಗೇರಾ ಗ್ರಾಮ ಸೇರಿದಂತೆ ಗೋಡಿಹಾಳ, ಅರ್ಜಣಗಿ, ಗಡ್ಡೇಸೂಗುರ ಸುತ್ತಮುತ್ತಲಿನ ಗ್ರಾಮಸ್ಥರು ಭಯದಿಂದ ಜೀವನ ಸಾಗಿಸುವಂತಾಗಿದೆ. ಅಲ್ಲದೇ ಗ್ರಾಮದ ಸುತ್ತಮುತ್ತಲಿನ ರೈತರು ಕೃಷಿ ಚಟುವಟಿಕೆಗಳಿಗೆ ತಮ್ಮ ಜಮೀನುಗಳಿಗೆ ತೆರಳಲು ಹೆದರುವಂತಾಗಿದೆ.
ವಡಗೇರಾ ತಾಲ್ಲೂಕಿನ ಕೃಷ್ಣಾ ನದಿ ತೀರದಲ್ಲಿ ಕುರಿ ಮೇಯಿಸಲು ತೆರಳಿದ್ದ ಕುರಿಗಾಹಿಯೊಬ್ಬರು ಕಳೆದ ವಾರ ಮೊಸಳೆ ದಾಳಿಯಿಂದ ಮೃತಪಟ್ಟಿದ್ದರು. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ರಸ್ತೆಯಲ್ಲಿ ಪ್ರತ್ಯಕ್ಷವಾದ ಮೊಸಳೆಯನ್ನ ಸೆರೆ ಹಿಡಿದು ನದಿಯಲ್ಲಿ ಬಿಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.