ಯಾದಗಿರಿ :ನಸುಕಿನ ಜಾವ ವ್ಯಕ್ತಿಯೋರ್ವ ಬಹಿರ್ದೆಸೆಗೆಂದು ಹೊರಗೆ ಬಂದಾಗ ಆತನ ಮೇಲೆ ಕರಡಿ ದಿಢೀರ್ ದಾಳಿ ನಡೆಸಿದೆ. ಆ ವ್ಯಕ್ತಿ ಕರಡಿಯೊಡನೆ ಸೆಣಸಾಡಿ ಆತ್ಮರಕ್ಷಣೆ ಮಾಡಿಕೊಂಡ ಘಟನೆ ಜಿಲ್ಲೆಯ ಹುಣಸಗಿ ಸಮೀಪದ ಕಕ್ಕೇರಾ ಪುರಸಭೆ ವ್ಯಾಪ್ತಿಯ ವಾರ್ಡ್ ನಂ. 12ರ ಜಂಪಾರದೊಡ್ಡಿಯಲ್ಲಿ ಸೋಮವಾರ ನಡೆದಿದೆ. ಕರಡಿಯೊಡನೆ ಪ್ರಾಣ ರಕ್ಷಣೆಗಾಗಿ ಸೆಣಸಾಟಕ್ಕಿಳಿದ ವ್ಯಕ್ತಿ ಹೆಸರು ರುದ್ರಪ್ಪ ಜಪ್ಪರದೊಡ್ಡಿ ಎಂದು ತಿಳಿದು ಬಂದಿದೆ.
ಕರಡಿಯು ಉಗುರಿನಿಂದ ಕಣ್ಣಿನ ಕೆಳಭಾಗ, ಹಣೆಯ ಮೇಲೆ, ಕೈಗಳಿಗೆ ಪರಚಿದೆ. ತನ್ನ ದೇಹದಿಂದ ರಕ್ತ ಹರಿಯುತ್ತಿದ್ದರೂ ಲೆಕ್ಕಿಸದೆ ಕೈಯಲ್ಲಿದ್ದ ಟವಲ್ನನ್ನು ಕರಡಿಯ ಬಾಯಿಗೆ ತುರುಕಿದ್ದಾನೆ. ಅದು ಬಾಯಿಯ ನೋವಿನಿಂದ ಸ್ಥಳದಿಂದ ಕಾಲ್ಕಿತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು, ಕರಡಿಗಾಗಿ ತಡಕಾಡಿದರು. ತೀವ್ರವಾಗಿ ಗಾಯಗೊಂಡಿದ್ದ ರುದ್ರಪ್ಪನನ್ನು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಲಿಂಗಸೂಗೂರು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಗಾಯಗೊಂಡ ರುದ್ರಪ್ಪ ಮಾತನಾಡಿ, ಕರಡಿ ದಾಳಿ ಮಾಡಿ ತಲೆಗೆ ಕಚ್ಚಿದೆ. ನಂತರ ನಾನು ರಕ್ಷಣೆ ಮಾಡಿಕೊಳ್ಳಲು ಪ್ರಯತ್ನ ಮಾಡಿದೆ. ಸ್ಥಳೀಯರು ಬಂದು ಕರಡಿಯನ್ನು ಓಡಿಸಿ ರಕ್ಷಣೆ ಮಾಡಿದ್ದಾರೆ ಎಂದರು.