ಯಾದಗಿರಿ:ಅತಿವೃಷ್ಟಿ ಹಾಗೂ ಭೀಮಾ ನದಿ ಪ್ರವಾಹಕ್ಕೆ ಯಾದಗಿರಿ ಜಿಲ್ಲೆಯ ಜನ ಅಕ್ಷರಶಃ ನಲುಗಿ ಹೋಗಿದ್ದಾರೆ. ಬರದ ನಾಡಲ್ಲಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ಅನ್ನದಾತರಿಗೆ ಬರಸಿಡಿಲು ಬಡಿದರೆ, ಸಾವಿರಾರು ಜನ ಸೂರು ಕಳೆದುಕೊಂಡು ಬೀದಿಗೆ ಬೀಳುವಂತೆ ಮಾಡಿದೆ.
ಆಗಸ್ಟ್ನಲ್ಲಿ ಸುರಿದ ಧಾರಾಕಾರ ಮಳೆಯಿಂದ ಮುಂಗಾರು ಬೆಳೆ ನಷ್ಟದಲ್ಲಿದ್ದ ಜಿಲ್ಲೆಯ ಅನ್ನದಾತರಿಗೆ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಮೇಘರಾಜ ಮತ್ತು ಭೀಮೆಯ ನೆರೆ ಹಾವಳಿ ಆಘಾತಗೊಳಿಸಿದೆ. ಸಾಲಸೂಲ ಮಾಡಿ ರೈತನು ಬೆಳೆದ ಭತ್ತ, ಹತ್ತಿ, ತೊಗರಿ ಸೇರಿದಂತೆ ವಿವಿಧ ಬೇಳೆ ನೀರು ಪಾಲಾಗುವ ಮೂಲಕ ಅಪಾರ ಪ್ರಮಾಣದ ಬೆಳೆ ನಷ್ಟ ಅನುಭವಿಸುವಂತಾದರೆ, ಅನೇಕರು ಮನೆ ಮಠ ಕಳೆದುಕೊಳ್ಳುವಂತೆ ಮಾಡಿದೆ. ಅತಿವೃಷ್ಟಿ ಹಾಗೂ ಪ್ರವಾಹದಿಂದ ಆದ ಹಾನಿ ಕುರಿತು ಜಿಲ್ಲಾಡಳಿತ ಜಂಟಿ ಸಮೀಕ್ಷೆ ನಡೆಸಿ ಹಾನಿಯಾದ ಅಂದಾಜು ಪಟ್ಟಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಜಿಲ್ಲಾಡಳಿತ ಸರ್ಕಾರಕ್ಕೆ ನೀಡಿದ ಒಟ್ಟು ಹಾನಿಯಾದ ಅಂದಾಜಿನ ಪಟ್ಟಿ ಈ ಕೆಳಗಿನಂತಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಮಳೆಯಿಂದ ಆದ ಬೆಳೆ ಹಾನಿ- 24 ಸಾವಿರ ಹೆಕ್ಟೇರ್ ಪ್ರದೇಶ, ಇದರ ಅಂದಾಜು ಮೊತ್ತ 46 ಕೋಟಿ ರೂ. ಅಕ್ಟೋಬರ್ ತಿಂಗಳಲ್ಲಿ ಮಳೆಯಿಂದ ಆದ ಬೆಳೆ ಹಾನಿ 12ಸಾವಿರದ 76 ಹೆಕ್ಟೇರ್ ಪ್ರದೇಶ, ಇದರ ಮೊತ್ತ 33 ಕೋಟಿ ರೂ. ಅಕ್ಟೋಬರ್ ತಿಂಗಳಲ್ಲಾದ ಭೀಮಾ ಪ್ರವಾಹದಿಂದ ಆದ ಬೆಳೆ ಹಾನಿ 17 ಸಾವಿರ ಹೆಕ್ಟೇರ್ ಪ್ರದೇಶ ಇದರ ಅಂದಾಜು ಮೊತ್ತ 24 ಕೋಟಿ ರೂ. ಅತಿವೃಷ್ಟಿ ಹಾಗೂ ಭೀಮಾ ನದಿ ಪ್ರವಾಹದಿಂದ ಜಿಲ್ಲೆಯಲ್ಲಿ ಒಟ್ಟು 53 ಸಾವಿರ 76 ಹೆಕ್ಟೇರ್ ಜಮೀನಿನಲ್ಲಿ ರೈತರು ಬೆಳೆದ ಬೆಳೆ ಹಾಳಗಿದ್ದು ಒಟ್ಟು 107 ಕೋಟಿ ರೂ. ಮೌಲ್ಯದ ಬೆಳೆ ಹಾನಿಯಾಗಿದೆ.