ಯಾದಗಿರಿ:ಮಹಾರಾಷ್ಟ ಸೇರಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಬೀಳುತ್ತಿರುವ ಹಿನ್ನೆಲೆ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿರುವ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗಿದೆ. ಬಸವಸಾಗರ ಜಲಾಶಯದಿಂದ 1 ಮೀಟರ್ ಎತ್ತರದಲ್ಲಿ 21 ಕ್ರಸ್ಟ್ ಗೇಟ್ ಗಳ ಮೂಲಕ 1.50 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ.
ಬಸವಸಾಗರ ಜಲಾಶಯವು ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 33.31 ಟಿ ಎಂ ಸಿ ಇದ್ದು, ಅದರಲ್ಲಿ 26.42 ಟಿಎಂಸಿ ನೀರು ಈಗ ಸಂಗ್ರಹವಾಗಿದೆ. ಬಸವಸಾಗರ ಜಲಾಶಯ ಪೂರ್ಣ ಭರ್ತಿಯಾಗಲು 6.89 ಟಿಎಂಸಿ ನೀರು ಮಾತ್ರ ಬೇಕಿದೆ. 492.25 ಮೀ. ಎತ್ತರ ಜಲಾಶಯದಲ್ಲಿ ಸದ್ಯ 490.64 ಮೀಟರ್ ನೀರು ಸಂಗ್ರಹವಾಗಿದೆ.
ಕೃಷ್ಣಾಗೆ ನೀರು ಬಿಡುಗಡೆ, ನದಿಗಿಳಿಯದಂತೆ ಎಚ್ಚರಿಕೆ: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1.60 ಲಕ್ಷ ಕ್ಯೂಸೆಕ್ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಮೇಲಿನಗಡ್ಡಿ, ದೇವರಗಡ್ಡಿ, ಬೆಂಚಿಗಡ್ಡಿ, ನೀಲಕಂಠರಾಯನಗಡ್ಡಿ, ತಿಂಥಣಿ, ಬಂಡೋಳ್ಳಿ ಸೇರಿದಂತೆ ಇತರ ಹಳ್ಳಿಗಳ ಜನ ಜಾನುವಾರು ಹಾಗೂ ಮೀನುಗಾರರು ನದಿಗಿಳಿಯದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಒಂದು ವೇಳೆ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರೀ ಜಲಾಶಯದಿಂದ ಹೆಚ್ಚನ ಪ್ರಮಾಣದ ನೀರು ಬಸವಸಾಗರ ಜಲಾಶಯಕ್ಕೆ ಹರಿದು ಬಂದರೆ ಜಲಾಶಯದ ನೀರಿನ ಮಟ್ಟವನ್ನು ಕಾಯ್ದುಕೊಂಡು ಮತ್ತೆ ಹೆಚ್ಚು ಪ್ರಮಾಣದ ನೀರು ಕೃಷ್ಣಾ ನದಿಗೆ ಹರಿಬಿಡಲಾಗುತ್ತದೆ ಎಂದು ಅಣೆಕಟ್ಟು ವಿಭಾಗಾಧಿಕಾರಿ ಪ್ರಕಾಶ ಮುದಗಲ್ ತಿಳಿಸಿದ್ದಾರೆ.