ವಿಜಯಪುರ: ರಾಜ್ಯದ ಕರಾವಳಿ ತೀರ ಮೀನುಗಾರರಿಗೆ ನೀಡಲಾಗುತ್ತಿರುವ ಶೂನ್ಯ ಬಡ್ಡಿದರದ ಸಾಲ ಯೋಜನೆಯನ್ನು ಈ ಭಾಗದ ಒಳನಾಡು ಮೀನುಗಾರರಿಗೂ ದೊರಕಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಮೀನುಗಾರಿಕಾ ಸಹಕಾರಿ ಸಂಘಗಳ ಪ್ರತಿನಿಧಿಗಳು, ಮೀನುಗಾರರ ಕುಂದು-ಕೊರತೆ ಆಲಿಸಿ ಮೀನುಗಾರಿಕೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕರಾವಳಿ ಭಾಗದ ಮೀನುಗಾರರಿಗೆ ಈಗಾಗಲೇ ಶೂನ್ಯ ಬಡ್ಡಿದರದಲ್ಲಿ 50 ಸಾವಿರ ರೂ.ಗಳ ಸಾಲ ಯೋಜನೆ ಜಾರಿಯಲ್ಲಿದೆ. ಇದನ್ನು ಈ ಭಾಗದ ಬಡ ಮೀನುಗಾರರಿಗೂ ವಿಸ್ತರಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿಲಾಗಿದೆ ಎಂದು ಹೇಳಿದರು.
ಕೃಷಿ ರೈತರಿಗೆ ನೀಡಲಾದ ಕಿಸಾನ್ ಕ್ರೇಡಿಟ್ ಕಾರ್ಡನ್ನು ಮೀನುಗಾರರಿಗೂ ನೀಡಲಾಗಿದೆ. ಶೇ.3ರ ಬಡ್ಡಿ ದರದಲ್ಲಿ 3 ಲಕ್ಷ ರೂ.ಗಳ ಸಾಲ ಯೋಜನೆ ರಾಷ್ಟ್ರೀಯ ಬ್ಯಾಂಕ್‍ಗಳ ಮೂಲಕ ನೀಡಲಾಗುತ್ತಿದೆ. ಇದರಲ್ಲಿ 2 ಲಕ್ಷ ರೂ. ಗಳನ್ನು ಶ್ಯೂರಿಟಿ ಇಲ್ಲದೆ ನೀಡಲಾಗುತ್ತಿದೆ ಎಂದರು.