ವಿಜಯಪುರ:ರಾಜ್ಯದಲ್ಲಿ ಹಲವೆಡೆ ಮಳೆರಾಯನ ಆರ್ಭಟ ಹೆಚ್ಚಾಗಿದ್ದು, ಭಾರಿ ಮಳೆಯಿಂದ ಜನರು ಪ್ರಾಣ ಕಳೆದುಕೊಂಡಿದ್ದ ಘಟನೆಗಳು ವರದಿಯಾಗಿದ್ದವು. ಇನ್ನು ಬಿಸಿಲ ನಾಡು ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಬಿಸಿಲಿನ ಬೇಗೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ತಾಪಮಾನ ಗರಿಷ್ಠ 42 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ. ಇದರಿಂದ ಯುವಕರು ಬಿಸಿಲಿನ ತಾಪ ತಣಿಸಿಕೊಳ್ಳಲು ಗ್ರಾಮೀಣ ಭಾಗದಲ್ಲಿ ನದಿ, ಬಾವಿಗಳಲ್ಲಿಗೆ ಈಜಲು ತೆರಳುತ್ತಿದ್ದರೆ. ಪಟ್ಟಣಗಳಲ್ಲಿ ಈಜುಕೊಳಗಳ ಮೊರೆ ಹೋಗುತ್ತಿದ್ದಾರೆ.
ಬಿಸಿಲಿನ ತಾಪಮಾನದ ದಾಖಲೆ ನೋಡಿದರೆ 2019 ಮೇ 30ರಂದು ಗರಿಷ್ಠ 43 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಅದು ಬಿಟ್ಟರೆ 2020ರ ಮೇ 27ರಂದು 42.5 ಡಿಗ್ರಿ ಸೆಲ್ಸಿಯಸ್ ಹಾಗೂ ಇಂದು 42 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ. ಇನ್ನು ಯಾದಗಿರಿ ಜಿಲ್ಲೆಯಲ್ಲಿ ಭಾನುವಾರ 45 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ವಿಜಯಪುರ ಜಿಲ್ಲೆಯಲ್ಲಿ ಇನ್ನೊಂದು ವಾರದಲ್ಲಿ ಗರಿಷ್ಠ ತಾಪಮಾನ ದಾಖಲಾಗಬಹುದು ಎನ್ನುವ ಅಂದಾಜು ಇದೆ ಎಂದು ಹಿಟ್ಟನಹಳ್ಳಿಯ ಕೃಷಿ ಮಹಾವಿದ್ಯಾಲಯದ ಹಮಾಮಾನ ಇಲಾಖೆ ತಜ್ಞರ ಅಭಿಪ್ರಾಯಪಟ್ಟಿದ್ದಾರೆ.
ಈಜುಕೊಳಕ್ಕೆ ಹರಿದು ಬರುತ್ತಿರುವ ಯುವಕರ ದಂಡು: ನಗರದಲ್ಲಿ ಹಲವು ಕಡೆಗಳಲ್ಲಿ ಇರುವ ಸ್ವಿಮ್ಮಿಂಗ್ ಪೂಲ್‌ಗಳಲ್ಲಿ ಈಜಲು ಬಾಲಕರಿಂದ ಹಿಡಿದು ವೃದ್ಧರವರೆಗೆ ಬರುತ್ತಿದ್ದಾರೆ. ಬೆಳಗ್ಗೆ 9 ಗಂಟೆಯಿಂದಲೇ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ನೀರಿನಲ್ಲಿ ಈಜಾಡಿ ಬಿಸಿಲಿನ ಝಳ ತಣಿಸಿಕೊಳ್ಳುತ್ತಿದ್ದಾರೆ. ಇನ್ನು ಸ್ವಿಮ್ಮಿಂಗ್ ಪೂಲ್‌ಗಳಲ್ಲಿ ಪ್ರತಿ ಗಂಟೆಗೆ 60 ರೂ.ಗಳಂತೆ ಶುಲ್ಕ ನಿಗದಿ ಮಾಡಲಾಗಿದೆ. ನಗರದ ಕನಕದಾಸ ಬಡಾವಣೆಯಲ್ಲಿರುವ ಈಜುಕೊಳದಲ್ಲಿ ಬಾಲಕರಿಗೆ ತಿಂಗಳಿಗೆ 600 ರೂ. ಯುವಕರಿಗೆ 1200 ಹಾಗೂ ಸರ್ಕಾರಿ ನೌಕರರಿಗೆ 600 ಶುಲ್ಕ ನಿಗದಿ ಮಾಡಲಾಗಿದೆ ಎನ್ನುತ್ತಾರೆ ಈಜುಕೊಳದ ನಿರ್ವಾಹಕಿ ಮುತ್ತವ್ವ ಪಾತ್ರೋಟಿ.